ಕರ್ನಾಟಕ

karnataka

ETV Bharat / business

ಅದಾನಿ ಹಿಂಡನ್​ಬರ್ಗ್​ ವಿವಾದ: 3 ತಿಂಗಳಲ್ಲಿ ತನಿಖೆ ಮುಗಿಸಲು ಸೆಬಿಗೆ ಸುಪ್ರೀಂ ಕೋರ್ಟ್​ ಆದೇಶ

SC on Adani Hindenburg row: ಕಾಯ್ದಿರಿಸಿದ್ದ ಅದಾನಿ ಹಿಂಡನ್‌ಬರ್ಗ್ ಪ್ರಕರಣದ ತೀರ್ಪನ್ನು ಸುಪ್ರೀಂಕೋರ್ಟ್​ ಇಂದು ಪ್ರಕಟಿಸಿತು. ಬಾಕಿ ಉಳಿದಿರುವ ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೆಬಿಗೆ ಸೂಚಿಸಿದೆ.

ಅದಾನಿ ಹಿಂಡನ್​ಬರ್ಗ್​ ವಿವಾದ:
ಅದಾನಿ ಹಿಂಡನ್​ಬರ್ಗ್​ ವಿವಾದ:

By ETV Bharat Karnataka Team

Published : Jan 3, 2024, 1:11 PM IST

ನವದೆಹಲಿ:ಅದಾನಿ-ಹಿಂಡನ್‌ಬರ್ಗ್ ಪ್ರಕರಣಗಳಲ್ಲಿ ಬಾಕಿ ಉಳಿದಿರುವ 2 ಪ್ರಕರಣಗಳ ತನಿಖೆಯನ್ನು 3 ತಿಂಗಳೊಳಗೆ ಪೂರ್ಣಗೊಳಿಸುವಂತೆ ಸೆಕ್ಯುರಿಟೀಸ್ ಎಕ್ಸ್‌ಚೇಂಜ್ ಬೋರ್ಡ್ ಆಫ್ ಇಂಡಿಯಾ (ಸೆಬಿ) ಗೆ ಸುಪ್ರೀಂ ಕೋರ್ಟ್ ಬುಧವಾರ ನಿರ್ದೇಶನ ನೀಡಿದೆ. ಜೊತೆಗೆ ಸೆಬಿಯ ಎಫ್‌ಪಿಐ ನಿಯಮಾವಳಿಗಳನ್ನು ರದ್ದುಗೊಳಿಸಲು ಇದೇ ವೇಳೆ ನಿರಾಕರಿಸಿದೆ.

ನ್ಯಾಯಾಲಯಗಳು ಸೆಬಿಯ ತನಿಖೆಯಲ್ಲಿ ಮಧ್ಯಪ್ರವೇಶಿಸಲು ಸಾಧ್ಯವಿಲ್ಲ. ತನಿಖೆಯನ್ನು ಸೆಬಿಯಿಂದ ಎಸ್‌ಐಟಿಗೆ ವರ್ಗಾಯಿಸಲೂ ಯಾವುದೇ ಬಲವಾದ ಆಧಾರವಿಲ್ಲ. ಹಿಂಡನ್‌ಬರ್ಗ್ ಅಥವಾ ಬೇರೆ ಯಾವುದೇ ವರದಿಗಳು ಪ್ರತ್ಯೇಕ ತನಿಖೆಗೆ ಆದೇಶಿಸಲು ಸೂಕ್ತ ಕಾರಣಗಳಿಲ್ಲ ಎಂದು ಕೋರ್ಟ್ ತೀರ್ಪಿನಲ್ಲಿ ಹೇಳಿದೆ.

ಅದಾನಿ ಗ್ರೂಪ್​ ವಿರುದ್ಧ ಅಮೆರಿಕದ ಹಿಂಡನ್​ಬರ್ಗ್​ ಸಂಸ್ಥೆ ಮಾಡಿದ ಆರೋಪಗಳ ವಿರುದ್ಧ ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿ ಕಾಯ್ದಿರಿಸಿದ್ದ ತೀರ್ಪನ್ನು ಇಂದು ಪ್ರಕಟಿಸಿದ ನ್ಯಾಯಮೂರ್ತಿಗಳಾದ ಜೆಬಿ ಪರ್ದಿವಾಲಾ ಮತ್ತು ಮನೋಜ್ ಮಿಶ್ರಾ ಅವರಿದ್ದ ಪೀಠ, ಸೆಬಿಯ ತನಿಖೆಯಲ್ಲಿ ನ್ಯಾಯಾಲಯದ ಪ್ರವೇಶ ಅಧಿಕಾರವು ಸೀಮಿತವಾಗಿದೆ. ಎಫ್‌ಪಿಐ ಮತ್ತು ಎಲ್‌ಒಡಿಆರ್ ನಿಯಮಗಳ ಮೇಲಿನ ತಿದ್ದುಪಡಿಗಳನ್ನು ಹಿಂತೆಗೆದುಕೊಳ್ಳುವಂತೆ ಸೆಬಿಗೆ ನಿರ್ದೇಶಿಸಲು ಯಾವುದೇ ಸೂಕ್ತ ಆಧಾರಗಳಿಲ್ಲ ಎಂದು ಹೇಳಿತು.

ಇನ್ನೆರಡು ಕೇಸ್​ ಬಾಕಿ:ಸೆಬಿಯು 22 ರ ಪೈಕಿ 20 ಪ್ರಕರಣಗಳಲ್ಲಿ ತನಿಖೆಯನ್ನು ಪೂರ್ಣಗೊಳಿಸಿದೆ. ಬಾಕಿ ಉಳಿದಿರುವ ಇನ್ನೆರಡು ಕೇಸ್​ಗಳನ್ನು ಮೂರು ತಿಂಗಳಲ್ಲಿ ಪೂರ್ಣಗೊಳಿಸಿ ವರದಿ ನೀಡಲು ನಿರ್ದೇಶಿಸಲಾಗುವುದು. ಭಾರತೀಯ ಹೂಡಿಕೆದಾರರ ಆಸಕ್ತಿಯನ್ನು ಬಲಪಡಿಸಲು ಕೇಂದ್ರ ಸರ್ಕಾರ ಮತ್ತು ಸೆಬಿ ಸೂಕ್ತ ನಿರ್ಧಾರ ಕೈಗೊಳ್ಳುತ್ತದೆ ಎಂದು ಕೋರ್ಟ್ ಹೇಳಿತು.

ಕಳೆದ ವರ್ಷ ನವೆಂಬರ್ 24 ರಂದು ವಿಚಾರಣೆ ಮುಗಿಸಿ ತೀರ್ಪು ಕಾಯ್ದಿರಿಸಿದ್ದ ಕೋರ್ಟ್​, ಅದಾನಿ ಸಮೂಹದ ವಿರುದ್ಧದ ಹಿಂಡನ್‌ಬರ್ಗ್ ವರದಿಯನ್ನು 'ವಾಸ್ತವಿಕ ಸ್ಥಿತಿ' ಎಂದು ಪರಿಗಣಿಸಲು ಸಾಧ್ಯವಿಲ್ಲ. ಈಗಾಗಲೇ ಸೆಬಿಯು ತನಿಖೆ ನಡೆಸುತ್ತಿದೆ. ಮುಕ್ತಾಯದ ಹಂತದಲ್ಲಿರುವ ತನಿಖೆಯನ್ನು ಬೇರೊಂದು ತನಿಖಾ ಸಂಸ್ಥೆಗ ವಹಿಸಲು ಸಾಧ್ಯವಿಲ್ಲ. ಸೆಬಿಯ ತನಿಖೆ ಮತ್ತು ತಜ್ಞರ ಸಮಿತಿಯ ಸದಸ್ಯರ ನಿಷ್ಪಕ್ಷಪಾತವನ್ನು ಅನುಮಾನಿಸುವ ಯಾವುದೇ ಆಧಾರಗಳಿಲ್ಲ ಎಂದಿದೆ.

ಎಸ್​ಐಟಿ ರಚನೆ ಸೂಕ್ತವಲ್ಲ:ಅದಾನಿ ಗ್ರೂಪ್ ಕಂಪನಿಗಳ ಎಂಪಿಎಸ್ ನಿಯಮಗಳ ಉಲ್ಲಂಘನೆಯ ಬಗ್ಗೆ ಈಗಾಗಲೇ ತನಿಖೆ ನಡೆಸುತ್ತಿರುವ ಸೆಬಿಯ ತನಿಖೆಯನ್ನು ಅನುಮಾನಿಸಿ, ಎಸ್‌ಐಟಿಯನ್ನು ರಚಿಸುವುದು ಸೂಕ್ತವಲ್ಲ ಎಂದೂ ಇದೇ ವೇಳೆ ಅಭಿಪ್ರಾಯಪಟ್ಟಿತು. ಕೇವಲ ಮಾಧ್ಯಮ ವರದಿಗಳನ್ನು ಆಧರಿಸಿ ಮತ್ತು ಅದರ ಚರ್ಚೆಗಳಿಂದ ಪ್ರಭಾವಿತವಾಗಿ ತನಿಖೆಯನ್ನು ಬದಲಿಸಲು ಪೀಠವು ನಿರಾಕರಿಸಿತು.

ಅದಾನಿ ಗ್ರೂಪ್​ ವಿರುದ್ಧ ಅಕ್ರಮಗಳ ಆರೋಪ ಮಾಡಿದ್ದ ಹಿಂಡನ್​ಬರ್ಗ್​ ವರದಿಯ ಮೇಲೆ ಮಾರುಕಟ್ಟೆ ನಿಯಂತ್ರಕ ಸಂಸ್ಥೆ ಸೆಬಿಯು ತನಿಖೆ ನಡೆಸುತ್ತಿದೆ. ನಿಯಂತ್ರಕ ಸಂಸ್ಥೆಯ ತನಿಖೆಯೇ ವಿಫಲವಾಗಿದೆ ಎಂಬ ಆರೋಪ ಕೇಳಿಬಂದಿದ್ದು, ಅದರ ವಿಚಾರಣೆಗೆ ಸುಪ್ರೀಂಕೋರ್ಟ್​ ಕಳೆದ ಮಾರ್ಚ್​ನಲ್ಲಿ ತಜ್ಞರ ಸಮಿತಿಯನ್ನು ರಚಿಸಿದೆ. ಸಮಿತಿಯ ನೇತೃತ್ವವನ್ನು ಸುಪ್ರೀಂ ಕೋರ್ಟ್​ನ ನಿವೃತ್ತ ನ್ಯಾಯಾಧೀಶ ಅಭಯ್ ಮನೋಹರ್ ಸಪ್ರೆ ಅವರು ವಹಿಸಿದ್ದಾರೆ. ಮೇ ತಿಂಗಳಲ್ಲಿ ಸಮಿತಿಯು ಸಲ್ಲಿಸಿದ ವರದಿಯಲ್ಲಿ ಅದಾನಿ ಗ್ರೂಪ್ ಸಮೂಹವು ಸ್ಟಾಕ್​ ಬೆಲೆಗಳನ್ನು ಕೃತಕವಾಗಿ ಹೆಚ್ಚಿಸಿದ ಬಗ್ಗೆ ಆರೋಪಗಳನ್ನು ಸಾಬೀತುಪಡಿಸಲು ಸಾಧ್ಯವಿಲ್ಲ ಎಂದು ಹೇಳಿತ್ತು.

ಇದನ್ನೂ ಓದಿ:2023ರಲ್ಲಿ 100 ಬಿಲಿಯನ್ ದಾಟಿದ ಯುಪಿಐ ವಹಿವಾಟುಗಳ ಸಂಖ್ಯೆ

ABOUT THE AUTHOR

...view details