ನವದೆಹಲಿ: ಬಜೆಟ್ ಸ್ನೇಹಿ ವಿಮಾನಯಾನ ಸಂಸ್ಥೆ ಅಕಾಸಾ ಏರ್ ಅಂತಾರಾಷ್ಟ್ರೀಯ ವಿಮಾನ ಹಾರಾಟಕ್ಕೆ ಅನುಮತಿ ಪಡೆದುಕೊಂಡಿದೆ. ಮೂಲಗಳ ಪ್ರಕಾರ, ಕಂಪನಿಯು ಡಿಸೆಂಬರ್ನಲ್ಲಿ ಅಂತಾರಾಷ್ಟ್ರೀಯ ಹಾರಾಟ ಪ್ರಾರಂಭಿಸಲು ಸಜ್ಜಾಗಿದೆ. ಆರಂಭಿಕವಾಗಿ ಮಧ್ಯಪ್ರಾಚ್ಯ ರಾಷ್ಟ್ರಗಳಿಗೆ ವಿಮಾನಯಾನ ಆರಂಭವಾಗಲಿದೆ. ಆದಾಗ್ಯೂ, ಕಂಪನಿಯು ಸರ್ಕಾರದಿಂದ ಸಂಚಾರ ಆರಂಭಕ್ಕೆ ಅನುಮತಿ ಮತ್ತು ಸಂಬಂಧಿತ ದೇಶಗಳಿಂದ ನಂತರದ ಅನುಮೋದನೆಗಾಗಿ ಕಾಯುತ್ತಿದೆ. ಈ ಸಂಚಾರ ಅನುಮತಿಗಳನ್ನು ಸಾಮಾನ್ಯವಾಗಿ ಸರ್ಕಾರಗಳು ಆಯಾ ರಾಷ್ಟ್ರಗಳ ವಿಮಾನಯಾನ ಸಂಸ್ಥೆಗಳಿಗೆ ದ್ವಿಪಕ್ಷೀಯ ಆಧಾರದ ಮೇಲೆ ಪರಸ್ಪರ ನೀಡುತ್ತವೆ.
ದುಬೈ ಮತ್ತು ದೋಹಾದಂತಹ ಪ್ರಮುಖ ಭಾರತ-ಮಧ್ಯಪ್ರಾಚ್ಯ ಮಾರ್ಗಗಳಲ್ಲಿ ಅಸ್ತಿತ್ವದಲ್ಲಿರುವ ಸಂಚಾರ ಅನುಮತಿಗಳನ್ನು ಈಗಾಗಲೇ ಸಂಪೂರ್ಣವಾಗಿ ಬಳಸಿಕೊಳ್ಳಲಾಗಿರುವುದು ಗಮನಾರ್ಹ. "ಅಕಾಸಾ ಏರ್ (ಮೆಸರ್ಸ್ ಎಸ್ಎನ್ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್) ನಿಗದಿತ ಅಂತಾರಾಷ್ಟ್ರೀಯ ವಾಹಕ ಎಂದು ಹೆಸರಿಸಲು ಅನುಮೋದನೆ ಕೋರಿತ್ತು ಮತ್ತು ನಂತರ ಸಂಚಾರ ಅನುಮತಿ ನೀಡುವಂತೆ ವಿನಂತಿಸಿತ್ತು. ಈ ಪ್ರಸ್ತಾಪವನ್ನು ಡಿಜಿಸಿಎಯೊಂದಿಗೆ ಸಮಾಲೋಚಿಸಿ ಪರಿಶೀಲಿಸಲಾಗಿದೆ ಮತ್ತು ಸಕ್ಷಮ ಪ್ರಾಧಿಕಾರದ ಅನುಮೋದನೆಯೊಂದಿಗೆ, ಅಕಾಸಾ ಏರ್ ಗೆ(ಮೆಸರ್ಸ್ ಎಸ್ಎನ್ವಿ ಏವಿಯೇಷನ್ ಪ್ರೈವೇಟ್ ಲಿಮಿಟೆಡ್) 2022 ರ ಎಐಸಿ 10 ದಿನಾಂಕ 19.04.22 ರ ನಿರಂತರ ಅನುಸರಣೆಗೆ ಒಳಪಟ್ಟು ಅಂತಾರಾಷ್ಟ್ರೀಯ ಕಾರ್ಯಾಚರಣೆಗಳನ್ನು ನಡೆಸಲು ಅನುಮತಿ ನೀಡಲು ನಿರ್ಧರಿಸಲಾಗಿದೆ" ಎಂದು ನಾಗರಿಕ ವಿಮಾನಯಾನ ಸಚಿವಾಲಯದ ಅಧೀನ ಕಾರ್ಯದರ್ಶಿ ಎಸ್ಪಿಆರ್ ತ್ರಿಪಾಠಿ ಹೊರಡಿಸಿದ ಪತ್ರದಲ್ಲಿ ತಿಳಿಸಲಾಗಿದೆ.