ನವದೆಹಲಿ: ರಷ್ಯಾ- ಉಕ್ರೇನ್ನಲ್ಲಿ ಮುಂದುವರೆದಿರುವ ಯುದ್ಧದಿಂದಾಗಿ ಜಾಗತಿಕ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಪ್ರಸ್ತುತ ವಿಶ್ವದ ಅನೇಕ ರಾಷ್ಟ್ರಗಳ ಆರ್ಥಿಕ ಸ್ಥಿತಿಗತಿಗಳು ಕಠಿಣ ಪರಿಸ್ಥಿತಿಗಳನ್ನು ಎದುರಿಸುತ್ತಿವೆ. ಉಕ್ರೇನ್ - ರಷ್ಯಾ ಸಮರದಿಂದಾಗಿ ಅಮೆರಿಕ ಮತ್ತು ಯುರೋಪಿಯನ್ ರಾಷ್ಟ್ರಗಳಲ್ಲಿ ಒಂದು ರೀತಿಯ ಹಿಂಜರಿತ ಕಂಡು ಬಂದಿವೆ. ಏರುತ್ತಿರುವ ಹಣದುಬ್ಬರವನ್ನ ನಿಯಂತ್ರಿಸಲು ಆ ರಾಷ್ಟ್ರಗಳು ಬಿಗಿಯಾದ ವಿತ್ತೀಯ ನೀತಿಗಳನ್ನು ಅನುಸರಿಸುತ್ತಿವೆ. ಈ ಮೂಲಕ ಮೊದಲಿನ ಹಳಿಗೆ ಬರಲು ಹರಸಾಹಸ ಮಾಡುತ್ತಿವೆ. ಈ ನಡುವೆ, ಭಾರತದ ಆರ್ಥಿಕತೆ ಶೇ 8 ರ ವೇಗದಲ್ಲೇ ಬೆಳವಣಿಗೆ ಕಾಣುತ್ತಿದೆ ಎಂದು ಎಸ್ಬಿಐನ ಸಂಶೋಧನಾ ತಂಡ ದೇಶದ ಹಣಕಾಸು ಸ್ಥಿತಿಗತಿಗಳನ್ನ ವಿಶ್ಲೇಷಿಸಿದೆ.
ಬಿಗಿಯಾದ ವಿತ್ತೀಯ ನೀತಿಯಿಂದ ಉಂಟಾದ ಆರ್ಥಿಕ ಹಿಂಜರಿತದ ಒತ್ತಡಗಳ ಹೊರತಾಗಿಯೂ, ಭಾರತೀಯ ಆರ್ಥಿಕತೆ ಹಿಂದಿನ ಮುನ್ಸೂಚನೆಗಳನ್ನು ಮೀರಿ ಮುನ್ನುಗ್ಗಲಿದೆ ಮತ್ತು ಪ್ರಸಕ್ತ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಶೇಕಡಾ 8 ಕ್ಕಿಂತ ಹೆಚ್ಚಿನ ಬೆಳವಣಿಗೆಯನ್ನು ಹೊಂದಲಿದೆ ಎಂದು ಎಸ್‌ಬಿಐ ಸಂಶೋಧನಾ ತಂಡ ಹೇಳಿದೆ.
ಯುರೋಪಿಯನ್ ಮತ್ತು ಅಮೇರಿಕನ್ ಸೆಂಟ್ರಲ್ ಬ್ಯಾಂಕ್‌ಗಳು ಹೆಚ್ಚಿನ ಹಣದುಬ್ಬರವನ್ನು ಎದುರಿಸಲು ವಿತ್ತೀಯ ನೀತಿಗಳನ್ನು ಬಿಗಿಗೊಳಿಸಿವೆ. ಇದು ಜಾಗತಿಕ ಆರ್ಥಿಕ ಹಿಂಜರಿತದ ಭೀತಿಗೆ ಕಾರಣವಾಯಿತು. ಅಷ್ಟೇ ಅಲ್ಲ ಅಭಿವೃದ್ಧಿಶೀಲ ಆರ್ಥಿಕತೆ ಹೊಂದಿರುವ ಭಾರತ ಮತ್ತು ಚೀನಾದ ಆರ್ಥಿಕತೆ ಮೇಲೆ ಪರಿಣಾಮ ಬೀರಿದ್ದು ಸುಳ್ಳಲ್ಲ ಎಂದು ಎಸ್‌ಬಿಐ ಸಂಶೋಧನಾ ತಂಡ ಹೇಳಿದೆ.
IMF ತನ್ನ ಇತ್ತೀಚಿನ ವರದಿಯಲ್ಲಿ ಜಾಗತಿಕ GDP ಬೆಳವಣಿಗೆಯ ಮುನ್ಸೂಚನೆಯನ್ನು ಪ್ರಸಕ್ತ ವರ್ಷ ಮತ್ತು ಮುಂದಿನ ವರ್ಷಕ್ಕೆ ಶೇ 3.5 ರಿಂದ 3ಕ್ಕೆ ಕಡಿತಗೊಳಿಸಿದೆ. ಆದಾಗ್ಯೂ, ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ ಆರ್ಥಿಕ ಸಂಶೋಧನಾ ತಂಡವು 30 ಅಧಿಕ ಆವರ್ತನ ಡೇಟಾ ಸೆಟ್‌ಗಳ ವಿಶ್ಲೇಷಣೆ ಮೂಲಕ ಭಾರತೀಯ ಆರ್ಥಿಕತೆ ಸ್ಥಿತಿಸ್ಥಾಪಕತ್ವ ಕಾಪಾಡಿಕೊಂಡಿದೆ ಎಂದು ಹೇಳಿದೆ. ಈ ಮೂಲಕ ಚೀನಾ ಸೇರಿದಂತೆ ಎಲ್ಲ ಪ್ರಮುಖ ಆರ್ಥಿಕತೆಗಳಲ್ಲಿ ಭಾರತದ ಆರ್ಥಿಕತೆಯ ಬೆಳವಣಿಗೆ ಸಾಧಿಸುವ ಮೂಲಕ ಮಿಂಚಲಿದೆ ಎಂದು ಹೇಳಿದೆ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಮೂರು ತಿಂಗಳುಗಳಲ್ಲಿ, ಏಪ್ರಿಲ್ - ಜೂನ್ 2023 ಅವಧಿಯಲ್ಲಿ, ಆರ್ಥಿಕ ಚಟುವಟಿಕೆಯು 2023-24ನೇ ಸಾಲಿನ ಹಣಕಾಸು ವರ್ಷದ ಮೊದಲ ತ್ರೈಮಾಸಿಕದಲ್ಲಿ ಹೆಚ್ಚು ಸ್ಥಿತಿಸ್ಥಾಪಕತ್ವ ಹೊಂದಿದೆ. ಮುಖ್ಯವಾಗಿ ಭಾರತದ ಆರ್ಥಿಕತೆಗೆ ಸೇವಾ ವಲಯ ಅತಿದೊಡ್ಡ ಕೊಡುಗೆ ನೀಡಿದೆ ಎಂದು ಎಸ್‌ಬಿಐ ಸಂಶೋಧನೆ ಹೇಳಿದೆ.
IMF ನ ಇತ್ತೀಚಿನ ವರದಿ ಅನ್ವಯ ಜಾಗತಿಕ ಬೆಳವಣಿಗೆ CY22 ನಲ್ಲಿ ಶೇ 3.5ರಿಂದ ಶೇ 3ಕ್ಕೆ ಇಳಿಕೆ ಕಾಣಲಿದೆ ಎಂದು ಅಂದಾಜಿಸಿತ್ತು. ಕೇಂದ್ರೀಯ ಬ್ಯಾಂಕ್‌ಗಳ ಕ್ಷಿಪ್ರ ದರ ಏರಿಕೆಯಿಂದಾಗಿ ಈ ಕುಸಿತ ಉಂಟಾಗಿದೆ. ಆದರೆ ಹೆಚ್ಚುತ್ತಿರುವ ಹಣದುಬ್ಬರವನ್ನ ನಿಯಂತ್ರಿಸಲು ಇಂತಹ ಕ್ರಮ ಅನಿವಾರ್ಯ ಎಂದು ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾ ಸಮೂಹದ ಮುಖ್ಯ ಆರ್ಥಿಕ ಸಲಹೆಗಾರ್ತಿ ಸೌಮ್ಯ ಕಾಂತಿ ಘೋಷ್ ಅವರು ವರದಿಯಲ್ಲಿ ಉಲ್ಲೇಖಿಸಿದ್ದಾರೆ.