ನವದೆಹಲಿ : 2,000 ರುಪಾಯಿ ಮುಖಬೆಲೆಯ ಕರೆನ್ಸಿ ನೋಟುಗಳನ್ನು ಬೇರೆ ನೋಟುಗಳಿಗೆ ಬದಲಾವಣೆ ಮಾಡಿಕೊಳ್ಳುವ ಪ್ರಕ್ರಿಯೆ ಇಂದಿನಿಂದ ಆರಂಭವಾಗಿದೆ. ಕೆಲ ಬ್ಯಾಂಕುಗಳ ಮುಂದೆ ನೋಟು ಬದಲಾಯಿಸಿಕೊಳ್ಳಲು ಸಣ್ಣ ಪ್ರಮಾಣದ ಕ್ಯೂನಲ್ಲಿ ಜನ ನಿಂತಿರುವುದು ಇಂದು ಬೆಳಗ್ಗೆ ಕಂಡು ಬಂತು. ಮಂಗಳವಾರದಿಂದ 2,000 ನೋಟನ್ನು ಬದಲಾಯಿಸಿಕೊಳ್ಳಬಹುದು ಎಂದು ಆರ್‌ಬಿಐ ಕಳೆದ ಶುಕ್ರವಾರ ಹೇಳಿತ್ತು. ಯಾವುದೇ ವಿನಂತಿ ಅರ್ಜಿ ಅಥವಾ ಗುರುತಿನ ಪುರಾವೆ ನೀಡದೆ ವ್ಯಕ್ತಿಯೊಬ್ಬ ಒಂದು ಬಾರಿಗೆ ಗರಿಷ್ಠ 20 ಸಾವಿರ ರುಪಾಯಿ ಮೌಲ್ಯದ 2,000 ರುಪಾಯಿ ನೋಟುಗಳನ್ನು ಬದಲಾಯಿಸಿಕೊಳ್ಳಬಹುದು.
ಇಂದು ಬೆಳಗ್ಗೆ ಬ್ಯಾಂಕುಗಳು ಓಪನ್ ಆದಾಗ ನೋಟು ಬದಲಾಯಿಸಿಕೊಳ್ಳಲು ಅಂಥ ದೊಡ್ಡ ಪ್ರಮಾಣದ ಜನಜಂಗುಳಿ ಎಲ್ಲಿಯೂ ಕಂಡು ಬಂದಿಲ್ಲ. ಮೆಟ್ರೊ ನಗರಗಳಲ್ಲಿನ ಖಾಸಗಿ ಬ್ಯಾಂಕುಗಳು ಎಂದಿನಂತೆ ಅಬಾಧಿತವಾಗಿ ಕೆಲಸ ಮಾಡುತ್ತಿವೆ. "ನೋಟು ಬದಲಾಯಿಸಿಕೊಳ್ಳಲು ಇನ್ನೂ ನಾಲ್ಕು ತಿಂಗಳು ಕಾಲಾವಧಿಯಿದೆ. ಅಲ್ಲದೆ ಇದು ಡಿಮಾನೆಟೈಸೇಶನ್ನಷ್ಟು ದೊಡ್ಡ ಪ್ರಮಾಣದಲ್ಲಿ ಇಲ್ಲದೆ ಇರುವುದರಿಂದ ಬ್ಯಾಂಕುಗಳಲ್ಲಿ ಜನದಟ್ಟಣೆ ಕಂಡು ಬಂದಿಲ್ಲ" ಎಂದು ಸಾರ್ವಜನಿಕ ವಲಯದ ಬ್ಯಾಂಕೊಂದರ ಹಿರಿಯ ಅಧಿಕಾರಿ ಹೇಳಿದರು.
2016 ರ ನವೆಂಬರ್ 8 ರಂದು ದೇಶದಲ್ಲಿ ನೋಟು ಅಮಾನ್ಯೀಕರಣ ಜಾರಿಗೊಳಿಸಲಾಗಿತ್ತು. ಅಂದರೆ ದೇಶದಲ್ಲಿ ಚಲಾವಣೆಯಲ್ಲಿದ್ದ ಶೇ 86 ರಷ್ಟು ನೋಟುಗಳನ್ನು ಅಮಾನ್ಯ ಮಾಡಲಾಗಿತ್ತು. ಈಗ 2000 ರುಪಾಯಿ ನೋಟನ್ನು ಹಿಂಪಡೆಯುವ ಪ್ರಕ್ರಿಯೆ ಆರಂಭವಾಗಿದ್ದರೂ ಅದನ್ನು ಅಮಾನ್ಯಗೊಳಿಸಲಾಗಿಲ್ಲ. ಅಚ್ಚರಿಯ ಬೆಳವಣಿಗೆಯಲ್ಲಿ ಆರ್‌ಬಿಐ ಶುಕ್ರವಾರ 2,000 ರುಪಾಯಿ ಕರೆನ್ಸಿ ನೋಟುಗಳನ್ನು ಚಲಾವಣೆಯಿಂದ ಹಿಂತೆಗೆದುಕೊಳ್ಳುವುದಾಗಿ ಘೋಷಿಸಿತು. ಸಾರ್ವಜನಿಕರು ಅಂಥ ನೋಟುಗಳನ್ನು ಸೆಪ್ಟೆಂಬರ್ 30ರವರೆಗೆ ಖಾತೆಗಳಲ್ಲಿ ಜಮಾ ಮಾಡಬಹುದು ಅಥವಾ ಬ್ಯಾಂಕ್‌ಗಳಲ್ಲಿ ವಿನಿಮಯ ಮಾಡಿಕೊಳ್ಳಬಹುದು.