ಮುಂಬೈ:ಭಾರತೀಯ ಈಕ್ವಿಟಿ ಸೂಚ್ಯಂಕಗಳು ಸೋಮವಾರದ ವಹಿವಾಟಿನಂದು ಸಕಾರಾತ್ಮಕ ಆರಂಭ ಕಂಂಡಿದ್ದು, ಬಿಎಸ್‌ಇ ಸೆನ್ಸೆಕ್ಸ್ 800 ಅಂಕ ಏರಿಕೆಯಾಗಿದೆ.
ಆಟೋ, ಬ್ಯಾಂಕಿಂಗ್, ಹಣಕಾಸು ಮತ್ತು ಐಟಿ ಷೇರುಗಳಲ್ಲಿ ಆರೋಗ್ಯಕರ ಖರೀದಿಗೆ ಸಾಕ್ಷಿಯಾಗಿದೆ. ಬೆಳಗ್ಗೆ 11.40ರ ಸುಮಾರಿಗೆ ಸೆನ್ಸೆಕ್ಸ್ 838 ಅಂಕ ಏರಿಕೆಯಾಗಿ 49,938 ಅಂಕಗಳಲ್ಲಿ ವಹಿವಾಟು ನಡೆಸುತ್ತಿದ್ದರೇ ರಾಷ್ಟ್ರೀಯ ಸೂಚ್ಯಂಕ ನಿಫ್ಟಿ 259 ಅಂಕ ಹೆಚ್ಚಳವಾಗಿ 14,788 ಅಂಕಗಳಷ್ಟು ಹೆಚ್ಚಳದಲ್ಲಿ ನಿರತವಾಗಿದೆ.
ಅಕ್ಟೋಬರ್ - ಡಿಸೆಂಬರ್ ಅವಧಿಯಲ್ಲಿ ಎರಡು ತ್ರೈಮಾಸಿಕ ಸಂಕೋಚನದ ನಂತರ ದೇಶದ ಆರ್ಥಿಕ ಬೆಳವಣಿಗೆಗೆ ಸಕರಾತ್ಮಕ ಹಾದಿಗೆ ಮರಳುತ್ತಿದ್ದಂತೆ ಪೇಟೆ ಹೂಡಿಕೆದಾರರಿಗೆ ಉತ್ತೇಜನ ನೀಡಿದೆ. ಸೆನ್ಸೆಕ್ಸ್ ವಿಭಾಗದಲ್ಲಿ ಅಗ್ರ 27 ಷೇರುಗಳು ಗ್ರೀನ್ ಝೋನ್ನಲ್ಲಿ ವ್ಯಾಪಾರ ಮಾಡುತ್ತಿವೆ.
ಇದನ್ನೂ ಓದಿ: ಆರ್ಥಿಕ ಸಂಕಷ್ಟ ಸರಿದೂಗಿಸಲು ಪರ್ಯಾಯ ಆದಾಯ ಮಾರ್ಗೋಪಾಯ: ಹೇಗಿದೆ ಬೊಕ್ಕಸದ ಸ್ಥಿತಿಗತಿ?
ಶುಕ್ರವಾರ ಬಿಎಸ್ಇ ಸೆನ್ಸೆಕ್ಸ್ 1,939.32 ಅಂಕ ಕುಸಿದು 49,099.99ಕ್ಕೆ ಕೊನೆಗೊಂಡಿತ್ತು. ಇದು ಕಳೆದ ವರ್ಷ ಮೇ 4ರ ನಂತರದ ಒಂದು ದಿನದ ಗರಿಷ್ಠ ಕುಸಿತವಾಗಿದೆ. ನಿಫ್ಟಿ ಕೂಡ 568.20 ಅಂಕ ಕುಸಿದಿತ್ತು.
ಕಳೆದ ವಾರದ ಪ್ರಕ್ಷುಬ್ಧತೆಯ ಬಳಿಕ ಬಾಂಡ್ ಮಾರುಕಟ್ಟೆಗಳಲ್ಲಿ ಕೆಲವು ಸ್ಥಿರತೆಯ ಮಧ್ಯೆ ಸೋಮವಾರ ಏಷ್ಯಾದ ಇತರ ಮಾರುಕಟ್ಟೆಗಳ ಷೇರುಗಳು ಮಧ್ಯಾಹ್ನದ ವಹಿವಾಟಿನಲ್ಲಿ ಲಾಭದ ವಹಿವಾಟು ನಡೆಸುತ್ತಿದ್ದವು. ಅಮೆರಿಕ ಉತ್ತೇಜಕ ಪ್ಯಾಕೇಜ್ಲ್ಲಿನ ಪ್ರಗತಿಯು ಜಾಗತಿಕವಾಗಿ ಹೂಡಿಕೆದಾರರ ಭಾವನೆಗಳಿಗೆ ಬೆಂಬಲ ನೀಡಿತು.
ಜಾಗತಿಕ ತೈಲ ಮಾನದಂಡವಾದ ಬ್ರೆಂಟ್ ಕಚ್ಚಾ ಬ್ಯಾರೆಲ್‌ಗೆ ಶೇ 0.58ರಷ್ಟು ಕಡಿಮೆಯಾಗಿ 65.59 ಡಾಲರ್‌ಗೆ ವಹಿವಾಟು ನಡೆಸುತ್ತಿದೆ. 2020ರ ಅಕ್ಟೋಬರ್-ಡಿಸೆಂಬರ್ ಅವಧಿಯಲ್ಲಿ ಜಿಡಿಪಿ ಶೇ 0.4ರಷ್ಟು ಏರಿಕೆಯಾಗಿದೆ ಎಂದು ರಾಷ್ಟ್ರೀಯ ಅಂಕಿ - ಅಂಶ ಕಚೇರಿ ಶುಕ್ರವಾರ ಬಿಡುಗಡೆ ಮಾಡಿತ್ತು.