ಮುಂಬೈ: ದೇಶದ ಷೇರುಪೇಟೆಯಲ್ಲಿ ಸತತವಾಗಿ ಗೂಳಿ ಓಟ ಮುಂದುವರೆದಿದ್ದು, 400 ಅಂಕಗಳ ಜಿಗಿತದೊಂದಿಗೆ ದಿನದ ಆರಂಭದಲ್ಲೇ ಸೆನ್ಸೆಕ್ಸ್ 62,000 ಗಡಿ ದಾಟುವ ಮೂಲಕ ಮತ್ತೊಂದು ಸಾರ್ವಕಾಲಿಕ ದಾಖಲೆ ಬರೆದಿದೆ. ಸೆನ್ಸೆಕ್ಸ್ 62,245ಕ್ಕೆ ತಲುಪುವ ಮೂಲಕ ದಿನದ ಗರಿಷ್ಠ ಮಟ್ಟಕ್ಕೆ ಹೋಗಿರುವುದು ಕೂಡ ಹೊಸ ದಾಖಲೆಯಾಗಿದೆ.
ನಿಫ್ಟಿ ಕೂಡ 101.05 ಅಂಕಗಳ ಏರಿಕೆಯೊಂದಿಗೆ 18,578.10ಗೆ ತಲುಪಿರುವುದು ಕೂಡ ಸಾರ್ವಕಾಲಿಕ ದಾಖಲೆಯಾಗಿದೆ.
ಹೆಚ್‌ಡಿಎಫ್‌ಸಿ ಬ್ಯಾಂಕ್, ಎಲ್ ಆ್ಯಂಡ್ಟಿ ಹಾಗೂ ರಿಲಯನ್ಸ್ ಇಂಡಸ್ಟ್ರೀಸ್, ಟೆಕ್ ಮಹೀಂದ್ರಾ, ಹೆಚ್‌ಸಿಎಲ್ ಟೆಕ್, ಹೆಚ್‌ಯುಎಲ್, ಆಕ್ಸೀಸ್ ಬ್ಯಾಂಕ್ ಹಾಗೂ ಭಾರ್ತಿ ಏರ್‌ಟೆಲ್ ಹೆಚ್ಚು ಲಾಭಗಳಿಸಿದ ಪ್ರಮುಖ ಸಂಸ್ಥೆಗಳಾಗಿವೆ. ಐಟಿಸಿ, ಅಲ್ಟ್ರಾ ಟೆಕ್ ಸಿಮೆಂಟ್, ಟೈಟಾನ್, ಪವರ್ ಗ್ರಿಡ್ ಹಾಗೂ ಕೊಟಕ್ ಬ್ಯಾಂಕ್ ಷೇರುಗಳು ಕೂಡ ಲಾಭದಲ್ಲಿದ್ದವು.
ನಿನ್ನೆ ಸೆನ್ಸೆಕ್ಸ್ 459.64 ಅಂಕಗಳ(ಶೇ.0.75) ಏರಿಕೆಯೊಂದಿಗೆ 61,765.59 ರಲ್ಲಿ ವಹಿವಾಟು ಮುಕ್ತಾಯಗೊಳಿಸಿತ್ತು. ನಿಫ್ಟಿ 138.50 ಅಂಕಗಳ ಹೆಚ್ಚಳದೊಂದಿಗೆ(ಶೇ. 0.76) 18,477.05 ಕ್ಕೆ ತಲುಪಿದ್ದು ಸೋಮವಾರ ಸಾರ್ವಕಾಲಿಕ ದಾಖಲೆಯಾಗಿತ್ತು.
ಹಾಂಗ್ ಕಾಂಗ್, ಶಾಂಘೈ, ಸಿಯೋಲ್ ಮತ್ತು ಟೋಕಿಯೊ ಷೇರುಪೇಟೆಯಲ್ಲೂ ಕೂಡ ಲಾಭದ ವಹಿವಾಟು ನಡೆಯುತ್ತಿದೆ. ಅಂತಾರಾಷ್ಟ್ರೀಯ ತೈಲ ಮಾರುಕಟ್ಟೆಯಲ್ಲಿ ಬ್ರೆಂಟ್ ಕಚ್ಚಾ ತೈಲವು ಪ್ರತಿ ಬ್ಯಾರೆಲ್‌ಗೆ ಶೇಕಡಾ 0.05 ರಷ್ಟು ಕುಸಿದಿದ್ದು, 84.29 ಡಾಲರ್‌ಗೆ ಇಳಿದಿದೆ.