ನವದೆಹಲಿ :ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಹೆಚ್ಚಾಗುತ್ತಿದೆ ಮತ್ತು ಆರಂಭಿಕ ಆರ್ಥಿಕ ಚೇತರಿಕೆಯ ಸಾಧ್ಯತೆಯ ಲಕ್ಷಣಗಳು ಕಾಣಿಸುತ್ತಿಲ್ಲ. ಹೀಗಾಗಿ ಬುಲಿಯನ್ ಮಾರುಕಟ್ಟೆಯಲ್ಲಿ ಚಿನ್ನದ ಬೆಲೆಯು ಏರಿಕೆಯತ್ತ ಸಾಗುತ್ತಿದೆ. ಮುಂದಿನ ಕೆಲವು ತಿಂಗಳಲ್ಲಿ ಅಂದರೇ ದೀಪಾವಳಿಯವರೆಗೆ ದೇಶಿಯ ಫ್ಯೂಚರ್ ಗೋಲ್ಡ್ ದರ ಪ್ರತಿ 10 ಗ್ರಾಂ.ಗೆ 52,000 ರೂ. ದಾಟಬಹುದು ಎನ್ನಲಾಗುತ್ತಿದೆ.
ಪ್ರಸ್ತುತ ಮಾರುಕಟ್ಟೆಯ ಪ್ರವೃತ್ತಿಯೊಂದಿಗೆ ಚಿನ್ನವು ಮುಂದಿನ ಎರಡು ವರ್ಷಗಳ ಅವಧಿಯಲ್ಲಿ 10 ಗ್ರಾಂ.ಗೆ 65,000 ರೂ.ಗಳಷ್ಟು ಐತಿಹಾಸಿಕ ಮಟ್ಟ ತಲುಪಬಹುದು ಎಂದು ತಜ್ಞರು ಅಂದಾಜಿಸಿದ್ದಾರೆ. ಹಳದಿ ಲೋಹದ ಫ್ಯೂಚರ್ ದರವು ಭಾರತದಲ್ಲಿ ತಡವಾಗಿ ಹೊಸ ಗರಿಷ್ಠ ಮಟ್ಟ ಮುಟ್ಟಿದೆ. ಬುಧವಾರ ಮಲ್ಟಿ-ಕಮೋಡಿಟಿ ಎಕ್ಸ್ಚೇಂಜ್ನಲ್ಲಿ (ಎಂಸಿಎಕ್ಸ್) ಚಿನ್ನದ ಭವಿಷ್ಯದ ಒಪ್ಪಂದವು ಸಾರ್ವಕಾಲಿಕ ಗರಿಷ್ಠ 10 ಗ್ರಾಂ.ಗೆ 48,589 ರೂ. ತಲುಪಿದೆ.
ದೇಶಿಯ ಮತ್ತು ಅಂತಾರಾಷ್ಟ್ರೀಯ ಚಿನ್ನದ ಬೆಲೆಗಳು ಇನ್ನೂ ದಾಖಲೆ ಮಟ್ಟಕ್ಕೆ ಏರಿಕೆ ಆಗಬಹುದು. ಮುಂದಿನ ದಿನಗಳಲ್ಲಿ ಹೊಸ ಗರಿಷ್ಠ ಮಟ್ಟ ಮುಟ್ಟುತ್ತವೆ ಎಂದು ಮಾರುಕಟ್ಟೆ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಪ್ರಪಂಚದಾದ್ಯಂತದ ಕೊರೊನಾ ವೈರಸ್ ಸೋಂಕಿನ ಹೊಸ ಪ್ರಕರಣ ಮಾರುಕಟ್ಟೆಯಲ್ಲಿ ಅನಿಶ್ಚಿತತೆ ಮತ್ತು ಭಯ ಹೆಚ್ಚಿಸಿವೆ. ಐಎಎನ್‌ಎಸ್‌ನೊಂದಿಗೆ ಮಾತನಾಡಿದ ಏಂಜಲ್ ಬ್ರೋಕಿಂಗ್‌ನ ಸರಕು ಮತ್ತು ಕರೆನ್ಸಿಗಳ ಸಂಶೋಧನಾ ವಿಭಾಗದ ಡಿವಿಪಿ ಅನುಜ್ ಗುಪ್ತಾ ಅವರು, ಅಲ್ಪಾವಧಿಯಲ್ಲಿ ಇದು 48,800-49,000 ರೂ. ತನಕ ತಲುಪಲಿದೆ ಎಂಬುದನ್ನು ನಾವು ನಿರೀಕ್ಷಿಸುತ್ತಿದ್ದೇವೆ.
ದೀರ್ಘಾವಧಿಯವರೆಗೆ, ಅಂದರೇ ದೀಪಾವಳಿಯವರೆಗೆ 51,000- 52,000 ರೂ. ದಾಟಬಹುದು ಎಂದರು. ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿನ ಬೆಲೆಗಳ ಆಧರಿಸಿ ಪ್ರಸ್ತುತ 1,762 ಡಾಲರ್ ಇರುವ ಪ್ರತಿ ಔನ್ಸ್ ಚಿನ್ನವು ಅಲ್ಪಾವಧಿಗೆ 1,790 ಡಾಲರ್ಗೆ ತಲುಪಬಹುದು. ದೀರ್ಘಾವಧಿಯಲ್ಲಿ ಅದು ಸುಮಾರು 1,820-1,850 ಡಾಲರ್ ಆಸುಪಾಸಿನಲ್ಲಿ ತಲುಪುವ ಸಾಧ್ಯತೆಯಿದೆ ಎಂದರು.
ಅಂತಾರಾಷ್ಟ್ರೀಯ ಹಣಕಾಸು ನಿಧಿಯು (ಐಎಂಎಫ್) ಜಾಗತಿಕ ಮತ್ತು ಭಾರತದ ಆರ್ಥಿಕ ಬೆಳವಣಿಗೆ ಮುನ್ನೋಟವನ್ನು ಇತ್ತೀಚಿಗೆ ಕೆಳಮಟ್ಟಕ್ಕೆ ಪರಿಷ್ಕರಣೆ ಮಾಡಿದೆ. ಹೆಚ್ಚುತ್ತಿರುವ ಕೊರೊನಾ ಪ್ರಕರಣ ಮತ್ತು ಚಿನ್ನದ ವಿನಿಮಯ ವಹಿವಾಟು ನಿಧಿಗಳ (ಇಟಿಎಫ್) ವ್ಯಾಪಕ ಬೇಡಿಕೆಯಿಂದಾಗಿ ಬಂಗಾರದ ಬೆಲೆಯು ಈ ಹಿಂದಿನ ದಾಖಲೆಯ ಮಟ್ಟ ಮುರಿಯಲು ಕಾರಣವಾಗಿದೆ ಎಂದು ಗುಪ್ತಾ ಹೇಳಿದರು.