ನವದೆಹಲಿ: ಹಣಕಾಸು ಬಿಕ್ಕಟ್ಟಿನಿಂದ ಖಾಸಗಿ ವಲಯದ ಯೆಸ್ ಬ್ಯಾಂಕ್ ಗ್ರಾಹಕರ ಹಾಗೂ ಹೂಡಿಕೆದಾರರ ಹಣ ಸುರಕ್ಷಿತವಾಗಿದೆ ಎಂದು ಕೇಂದ್ರ ಸರ್ಕಾರ ಹಾಗೂ ಭಾರತೀಯ ರಿಸರ್ವ್ ಬ್ಯಾಂಕ್ (ಆರ್‌ಬಿಐ) ಆಶ್ವಾಸನೆ ನೀಡಿದೆ.
ಯೆಸ್ ಬ್ಯಾಂಕ್ ಸಮಸ್ಯೆಯನ್ನು ಶೀಘ್ರವಾಗಿ ಪರಿಹರಿಸಲು ಭಾರತೀಯ ರಿಸರ್ವ್ ಬ್ಯಾಂಕ್ ಶ್ರಮಿಸುತ್ತಿದೆ ಎಂದು ಹಣಕಾಸು ಸಚಿವ ನಿರ್ಮಲಾ ಸೀತಾರಾಮನ್ ಅವರು ಆತಂಕದಲ್ಲಿರುವ ಗ್ರಾಹಕರಿಗೆ ಅಭಯ ನೀಡಿದರು.
ಆರ್ಬಿಐನ ಗವರ್ನರ್ ಶಕ್ತಿಕಾಂತ್ ದಾಸ್ ಸಹ ಯೆಸ್ ಬ್ಯಾಂಕ್‌ನ ಯಾವುದೇ ಠೇವಣಿದಾರರ ಒಂದು ಪೈಸೆಯೂ ನಷ್ಟವಾಗದಂತೆ ನೋಡಿಕೊಳ್ಳುವ ಭರವಸೆ ನೀಡಿದ್ದಾರೆ. ಯೆಸ್ ಬ್ಯಾಂಕ್‌ನ ನಿಯಂತ್ರಣ ಕ್ರಮಗಳು ಠೇವಣಿದಾರರ, ಬ್ಯಾಂಕ್ ಮತ್ತು ಆರ್ಥಿಕತೆಯ ಹಿತದೃಷ್ಟಿಯಿಂದ ತೆಗೆದುಕೊಳ್ಳಲಾಗಿದೆ ಎಂದು ವಹಿವಾಟು ನಿರ್ಬಂಧವನ್ನು ಸಮರ್ಥಿಸಿಕೊಂಡರು.
ಬ್ಯಾಂಕ್‌ನ ಪ್ರತಿ ಠೇವಣಿದಾರರ ಹಣ ಸುರಕ್ಷಿತವಾಗಿದೆ ಎಂದು ನಾನು ಭರವಸೆ ನೀಡಲು ಬಯಸುತ್ತೇನೆ. ನಾನು ಆರ್‌ಬಿಐನೊಂದಿಗೆ ನಿರಂತರ ಸಂಪರ್ಕದಲ್ಲಿದ್ದೇನೆ. ಆರ್‌ಬಿಐ ಮತ್ತು ಕೇಂದ್ರ ಸರ್ಕಾರ ಒಗ್ಗೂಡಿ ಯೆಸ್ ಬ್ಯಾಂಕ್ ಸಮಸ್ಯೆಯನ್ನು ವಿವರವಾಗಿ ಪರೀಕ್ಷಿಸುತ್ತಿದ್ದೇವೆ. ಎಲ್ಲರ ಹಿತದೃಷ್ಟಿಯಿಂದ ಕ್ರಮ ಕೈಗೊಳ್ಳಲಾಗುವುದು ಎಂದು ಸೀತಾರಾಮನ್ ಹೇಳಿದರು.