ನವದೆಹಲಿ:ದೇಶದ ಒಟ್ಟು ನಿವ್ವಳ ಉತ್ಪನ್ನದ (ಜಿಡಿಪಿ) ಪಾಲುದಾರಿಕೆಯಲ್ಲಿ 2030ರ ವೇಳೆಗೆ ನಗರ ಪ್ರದೇಶದ ಜನರು ಹೆಚ್ಚಿನ ಪ್ರಮಾಣದ ಕೊಡುಗೆ ನೀಡಲಿದ್ದಾರೆ.
ಸಿಬಿಆರ್‌ಇ ಮತ್ತು ಸಿಆರ್ಎಡಿಎಐ ಜಂಟಿಯಾಗಿ ನಡೆಸಿದ ಸಮೀಕ್ಷೆಯಲ್ಲಿ ಈ ಅಂಶ ತಿಳಿದು ಬಂದಿದ್ದು, ಮುಂದಿನ 11 ವರ್ಷದಲ್ಲಿ ಒಟ್ಟು ಜಿಡಿಪಿಯಲ್ಲಿ ನಗರ ಪ್ರದೇಶದವರು ಶೇ 75ರಷ್ಟು ಹಾಗೂ ಗ್ರಾಮೀಣ ಭಾಗದವರು ಶೇ 25ರಷ್ಟು ಪಾಲುದಾರಿಕೆ ಒದಗಿಸಲಿದ್ದಾರೆ. ನಗರ ವಾಸಿಗರು ಪ್ರಸ್ತುತ ಶೇ 63ರಷ್ಟು ಪಾಲುದಾರಿಕೆ ನೀಡುತ್ತಿದ್ದಾರೆ.
2030ರಲ್ಲಿಯೂ ಭಾರತದ ಪ್ರಮುಖ ನಗರಗಳು ವಿಶ್ವದಲ್ಲಿ ವೇಗವಾಗಿ ಬೆಳವಣಿಗೆ ಕಾಪಾಡಿಕೊಳ್ಳಲಿವೆ. ದೇಶದ ಶೇ 7ರಿಂದ 8ರಷ್ಟು ಜಿಡಿಪಿ ಪಾಲು ಮೂಲ ಸೌಕರ್ಯಗಳಿಗಾಗಿ ಖರ್ಚು ಮಾಡಬೇಕಾಗುತ್ತದೆ ಎಂದು ಹೇಳಿದೆ.
2030ರ ವೇಳೆಗೆ ಭಾರತದ ಆರ್ಥಿಕತೆ 9 ಟ್ರಿಲಿಯನ್ ಡಾಲರ್ಗೆ (₹ 637 ಶತಕೋಟಿ) ತಲುಪಬಹುದು. ಇದೇ ವೇಳೆ, 1.5 ಬಿಲಿಯನ್ ಜನಸಂಖ್ಯೆಯ ತಲಾ ಆದಾಯವು ಸುಮಾರು 6,525 ಡಾಲರ್ (₹ 3,98,798) ಮುಟ್ಟಬಹುದು ಎಂದು ತಿಳಿಸಿದೆ.
ವರದಿಯ ಬಗ್ಗೆ ಪ್ರತಿಕ್ರಿಯಿಸಿದ ಸಿಬಿಆರ್‌ಇ ಸಿಇಒ ಅನ್ಶುಮಾನ್ ಮ್ಯಾಗಜೀನ್, ಸಕಾರಾತ್ಮಕ ನೀತಿಯ ಸುಧಾರಣೆಗಳು ಮತ್ತು ಬಲವಾದ ಕಾರ್ಯ ವಿಧಾನದಿಂದ ಭಾರತದ ಆರ್ಥಿಕ ಬೆಳವಣಿಗೆ ವೇಗವು ಮುಂದಿನ 10 ವರ್ಷವೂ ಸ್ಥಿರವಾಗಿ ಮುಂದುವರಿಯಲಿದೆ. ಸುಧಾರಿತ ಆಡಳಿತ, ಮಾನವ ಸಂಪನ್ಮೂಲದ ನವೀಕರಣ, ವ್ಯವಸ್ಥಿತ ಸಂಪರ್ಕ, ಮೂಲಸೌಕರ್ಯಗಳ ವರ್ಧನೆ, ನೀತಿಗಳ ಸುಧಾರಣೆ ಹಾಗೂ ಪರಿಸರ ವ್ಯವಸ್ಥೆಯ ಸಮಗ್ರ ಸುಸ್ಥಿರತೆಯು ಬೆಳವಣಿಗೆ ಪಥವನ್ನು ಸುಗಮಗೊಳಿಸಲಿವೆ ಎಂದು ಅಂದಾಜಿಸಿದ್ದಾರೆ.