ನವದೆಹಲಿ:ದೇಶದಆರ್ಥಿಕತೆಯ ಬಹುದೊಡ್ಡ ಜವಾಬ್ದಾರಿ ಇರುವ ವಿತ್ತೀಯ ಖಾತೆ ಹೊಣೆಗಾರಿಕೆ ಪಿಯೂಷ್ ಗೋಯಲ್ ಹೆಗಲಿಗೆ ಬೀಳಲಿದೆ ಎಂದು ಹೇಳಲಾಗುತ್ತಿದೆ.
ಕಳೆದ ಬಾರಿ ರೈಲ್ವೇ ಖಾತೆಯನ್ನು ನಿಭಾಯಿಸಿದ್ದು, ವಿತ್ತ ಸಚಿವ ಅರುಣ್ ಜೇಟ್ಲಿ ಅವರು ಅನಾರೋಗ್ಯ ಪೀಡಿತರಾಗಿದ್ದಾಗ 2 ಬಾರಿ ಚಿಕಿತ್ಸೆಗೆ ತೆರಳಿದ್ದಾಗಲೂ ಗೋಯಲ್ ತಾತ್ಕಾಲಿಕ ಹಣಕಾಸು ಸಚಿವರಾಗಿ ಕಾರ್ಯನಿರ್ವಹಿಸಿದ್ದರು. ಜೊತೆಗೆ ಜೇಟ್ಲಿ ಅನುಪಸ್ಥಿತಿಯಲ್ಲಿ ಕೇಂದ್ರದ ಮಧ್ಯಂತರ ಬಜೆಟ್ ಸಹ ಘೋಷಿಸಿದ್ದು ಇವರ ಹೆಗ್ಗಳಿಕೆ.
ಮೂಲಗಳ ಪ್ರಕಾರ, ಅರುಣ್ ಜೇಟ್ಲಿ ಅವರು ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದು,ಮತ್ತೊಂದು ಅವಧಿಗೆ ಅವರು ಮೋದಿ ಕ್ಯಾಬಿನೆಟ್ ಸೇರುತ್ತಿಲ್ಲ. ಹೀಗಾಗಿ, ಆರ್ಥಿಕತೆಯಂಥ ಗುರುತರ ಹೊಣೆಗಾರಿಕೆಯನ್ನು ಸಮರ್ಥ ಸಚಿವರ ಹೆಗಲಿಗೆ ಒಪ್ಪಿಸಲು ನೂತನ ಸರ್ಕಾರ ಚಿಂತಿಸುತ್ತಿದೆ ಎನ್ನಲಾಗುತ್ತಿದೆ.
ಎನ್ಡಿಎ ಆಡಳಿತಾವಧಿಯ ಕೊನೆಯಲ್ಲಿ ನಿಧಾನಗತಿಯ ಆರ್ಥಿಕತೆ ಹಾಗೂ ವಿತ್ತೀಯ ತೀರ್ಮಾನಗಳಿಗೆ ಸಂಬಂಧಿಸಿದ ವರದಿಗಳು ಸರ್ಕಾರಕ್ಕೆ ಸಾಕಷ್ಟು ಮುಜುಗರ ತರಿಸಿದ್ದವು. ಇಂತಹ ಕಠಿಣ ಪರಿಸ್ಥಿತಿಯಲ್ಲಿ ಗೋಯಲ್ ವಸ್ತುಸ್ಥಿತಿಯನ್ನು ಅರ್ಥೈಸಿಕೊಂಡು ಬಿಗಿಯಾದ ಬಜೆಟ್ ಮಂಡಿಸಿದ್ದಾರೆ ಎಂದಿರುವ ಮೋದಿ, ಹೊಸಬರಿಗೆ ಅವಕಾಶ ನೀಡುವ ಬದಲು ಇವರನ್ನೇ ಮುಂದುವರಿಸುವ ಇಂಗಿತ ಹೊಂದಿದ್ದಾರೆ ಎಂದು ತಿಳಿದು ಬಂದಿದೆ.