ನವದೆಹಲಿ: ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಮಂಡಳಿಯು ಜೂನ್ 12ರಂದು ಸಭೆ ಸೇರಲಿದ್ದು, ತೆರಿಗೆ ಆದಾಯದ ಮೇಲೆ ಕೋವಿಡ್ -19 ಸಾಂಕ್ರಾಮಿಕ ಬೀರಿದ ಪರಿಣಾಮದ ಬಗ್ಗೆ ಚರ್ಚಿಸುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಕೇಂದ್ರ ಮತ್ತು ರಾಜ್ಯಗಳ ಆದಾಯದ ಮೇಲೆ ಸಾಂಕ್ರಾಮಿಕ ರೋಗದ ಪರಿಣಾಮ ಮತ್ತು ಆದಾಯದ ಅಂತರ ನಿವಾರಿಸುವ ಮಾರ್ಗಗಳ ಕುರಿತು ಸಭೆಯಲ್ಲಿ ಚರ್ಚಿಸಲಾಗುವುದು ಎಂದು ಮೂಲಗಳು ಹೇಳಿವೆ.
ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಅನುಷ್ಠಾನದಿಂದಾಗಿ ರಾಜ್ಯಗಳಿಗೆ ಆದಾಯ ನಷ್ಟ ಸರಿದೂಗಿಸಲು ಹಣ ಸಂಗ್ರಹಿಸುವ ಮಾರ್ಗಗಳ ಬಗ್ಗೆಯೂ ಕೌನ್ಸಿಲ್ನಲ್ಲಿ ಪ್ರಸ್ತಾಪ ಆಗಲಿದೆ.
ಪರಿಹಾರಕ್ಕೆ ಬೇಕಾದ ಅವಶ್ಯಕತೆಗಳನ್ನು ಪೂರೈಸಲು ಮಾರುಕಟ್ಟೆಯಿಂದ ಸಾಲ ಪಡೆಯುವ ಕಾನೂನುಬದ್ಧತೆಯನ್ನು ಕೇಂದ್ರ ಪರಿಶೀಲಿಸುತ್ತದೆ ಎಂದು 2020ರ ಮಾರ್ಚ್ 14ರಂದು ನಡೆದ ಹಿಂದಿನ ಕೌನ್ಸಿಲ್ ಸಭೆಯಲ್ಲಿ ಸೀತಾರಾಮನ್ ಹೇಳಿದ್ದರು.
2017ರ ಆಗಸ್ಟ್ನಿಂದ 2020ರ ಜನವರಿವರೆಗೆ ಜಿಎಸ್‌ಟಿ ರಿಟರ್ನ್ಸ್ ಸಲ್ಲಿಸದಿದ್ದಕ್ಕೆ ವಿಳಂಬ ಶುಲ್ಕ ಮನ್ನಾ ಮಾಡುವ ಬಗ್ಗೆ ಕೌನ್ಸಿಲ್ ಚರ್ಚಿಸಲಿದೆ.