ನವದೆಹಲಿ: ಕೊರೊನಾ ವೈರಸ್ ಸಾಂಕ್ರಾಮಿಕ ರೋಗ ಸ್ಥಗಿತಗೊಳಿಸಿರುವ ಆರ್ಥಿಕ ಚಟುವಟಿಕೆಯಿಂದಾಗಿ ವಿಶ್ವಾದ್ಯಂತ ಆರ್ಥಿಕತೆಯು ಹಿಂಜರಿಕೆಯ ಹಂತ ಪ್ರವೇಶಿಸಿದಾಗಿನಿಂದ ತಜ್ಞರು ಮತ್ತು ವಿತ್ತೀಯ ನಿರ್ವಾಹಕರು ಚೇತರಿಕೆ ಪ್ರಕ್ರಿಯೆಯ ಪಥವನ್ನು ಊಹಿಸುವಲ್ಲಿ ನಿರತರಾಗಿದ್ದಾರೆ.
ಇಲ್ಲಿಯವರೆಗೆ ಬಹುತೇಕ ಅರ್ಥಶಾಸ್ತ್ರಜ್ಞರು 'ಯು', 'ವಿ', 'ಡಬ್ಲ್ಯೂ', 'ಝ್ಯಡ್' ಅಥವಾ 'ಎಲ್' ಅಕ್ಷರಗಳ ಮಾದರಿಯಲ್ಲಿ ಆರ್ಥಿಕತೆಯ ಬೆಳವಣಿಗೆಯ ಹಾದಿ ಮರುಕಳಿಸಲಿದೆ ಎಂದು ಅಂದಾಜಿಸಿದ್ದರು. ಆದರೆ ಈಗ, ಅನೇಕರು ಹೊಸ ಮತ್ತು ಹೆಚ್ಚು ಭೀಕರವಾದ ಚೇತರಿಕೆಯ ಹಾದಿಯ ಬಗ್ಗೆ ಎಚ್ಚರಿಕೆ ನೀಡಿದ್ದಾರೆ. ಕೊರೊನಾ ಬಿಕ್ಕಟ್ಟಿನ ಆರ್ಥಿಕತೆಯು 'ಕೆ' ಆಕಾರದ ಚೇತರಿಕೆ ಕಾಣುತ್ತೆ ಎಂಬುದು ಅವರ ವಾದ.
'ಕೆ' ಆಕಾರದ ಚೇತರಿಕೆ ಎಂದರೇನು?
'ಕೆ' ಆಕಾರದ ಚೇತರಿಕೆಯು ವಿವಿಧ ಕೈಗಾರಿಕೆಗಳು, ಉದ್ಯಮಿವಾರ ಕ್ಷೇತ್ರಗಳು ಅಥವಾ ಜನರ ಮೇಲೆ ಮಂದಗತಿಯಂತಹ ಪರಿಣಾಮ ಸೂಚಿಸುತ್ತದೆ. ಈ ಆರ್ಥಿಕ ಸನ್ನಿವೇಶದಲ್ಲಿ 'ಕೆ' ಅಕ್ಷರದ ಎರಡು ಕಡ್ಡಿಗಳು ವಿಭಿನ್ನ ದಿಕ್ಕುಗಳಲ್ಲಿ ಸಾಗುತ್ತದೆ. ಆರ್ಥಿಕತೆಯ ಕೆಲವು ಭಾಗಗಳು ಪ್ರವರ್ಧಮಾನಕ್ಕೆ ಬಂದರೆ ಮತ್ತೆ ಕೆಲವು ಶೀಘ್ರವಾಗಿ ಚೇತರಿಸಿಕೊಳ್ಳುತ್ತವೆ. ಆದರೆ ಇತರೆ ಭಾಗಗಳು ಕುಸಿತಕ್ಕೆ ಒಳಗಾಗುತ್ತವೆ.
ಉದಾ: ತಂತ್ರಜ್ಞಾನ ಮತ್ತು ಅಂತರ್ಜಾಲದಿಂದ ನಡೆಸಲ್ಪಡುವ ಕೈಗಾರಿಕೆಗಳು ಸಾಂಕ್ರಾಮಿಕ ಆಘಾತದಿಂದ ಚೇತರಿಸಿಕೊಂಡು ಕೋವಿಡ್ ಪೂರ್ವದ ಕಾರ್ಯಾಚರಣೆಯ ಮಟ್ಟಕ್ಕೆ ಮರಳಿವೆ ಎಂಬಂತೆ ತೋರುತ್ತವೆ. ಪ್ರಯಾಣ, ಮನರಂಜನೆ, ಆತಿಥ್ಯ ಮತ್ತು ಆಹಾರ ಸೇವೆ ಸಂಬಂಧಿದ ಕೈಗಾರಿಕೆಗಳು ತಮ್ಮ ಮಾರ್ಚ್‌ನಿಂದ ಇಳಿಮುಖದತ್ತ ಸಾಗಿವೆ.
ಬೆಳೆಯುತ್ತಿರುವ ಆದಾಯ ಅಸಮಾನತೆಯು 'ಕೆ' ಆಕಾರದ ಆರ್ಥಿಕ ಚೇತರಿಕೆ ಸಿದ್ಧಾಂತದ ಪ್ರಮುಖ ಲಕ್ಷಣವಾಗಿದೆ. ವಿವಿಧ ತಜ್ಞರು ವಿವರಿಸಿದಂತೆ ಆರ್ಥಿಕತೆಯು 'ಕೆ' ಆಕಾರದ ಚೇತರಿಕೆ ಕಂಡಾಗ ವಸ್ತುಗಳು ಹೊಂದಿದ್ದವರಿಗೆ ಉತ್ತಮವಾದರೇ ಅವುಗಳನ್ನು ಹೊಂದಿರದವರಿಗೆ ತೀರಾ ಕೆಟ್ಟದಾಗಿ ಪ್ರಭಾವ ಬೀರಲಿದೆ.
ಷೇರು ಮಾರುಕಟ್ಟೆಯ ಪ್ರವೃತ್ತಿಗಳು ಮತ್ತು ಆರ್ಥಿಕತೆಯ ನೈಜ ಸ್ಥಿತಿಯ ನಡುವೆ ಹೆಚ್ಚುತ್ತಿರುವ ಭಿನ್ನತೆ 'ಕೆ' ಆಕಾರದ ಚೇತರಿಕೆಯ ಸೂಚಕವಾಗಿದೆ. ಅಭಿವೃದ್ಧಿ ಹೊಂದಿದ ಮತ್ತು ಉದಯೋನ್ಮುಖ ಆರ್ಥಿಕತೆಗಳು ಈಕ್ವಿಟಿ ಮಾರುಕಟ್ಟೆಗಳಲ್ಲಿ ಭಾರಿ ಏರಿಕೆ ಕಂಡಿವೆ. ಅವುಗಳ ಒಟ್ಟು ದೇಶೀಯ ಉತ್ಪನ್ನ (ಜಿಡಿಪಿ) ಬೆಳವಣಿಗೆಯ ದರಗಳು ನಕಾರಾತ್ಮಕದತ್ತ ಧುಮುಕಿದವು.
ವಿತ್ತೀಯ ತಜ್ಞರ ವಾದವೇನು?
ವರ್ಜೀನಿಯಾ ವಿಶ್ವವಿದ್ಯಾನಿಲಯದ ವಿಲಿಯಂ ಮತ್ತು ಮೇರಿಯ ಅರ್ಥಶಾಸ್ತ್ರ ವಿಭಾಗದ ಸಹಾಯಕ ಉಪನ್ಯಾಸಕ ಪೀಟರ್ ಅಟ್ವಾಟರ್ ಅವರು ‘ಕೆ-ಆಕಾರ’ ಸಿದ್ಧಾಂತ ರೂಪಿಸಿದ್ದಾರೆ. 'ನಾನು ಇದನ್ನು 'ಕೆ' ಆಕಾರದ ಚೇತರಿಕೆ ಎಂದು ಕರೆಯುತ್ತೇನೆ. ಏಕೆಂದರೆ ಕೆಲವರಿಗೆ ಇದು ತೀವ್ರವಾಗಿ ಚೇತರಿಕೆಯಾಗಿದ್ದರೆ ಇದು ಇತರರಿಗೆ ನಿರಂತರ ಕುಸಿತವಾಗಿ ಇರಲಿದ' ಎಂದು ಅಂತಾರಾಷ್ಟ್ರೀಯ ಮಾಧ್ಯಮವೊಂದಕ್ಕೆ ಹೇಳಿದ್ದರು.
ಅತಿದೊಡ್ಡ ಮತ್ತು ಶ್ರೀಮಂತರು ಚೇತರಿಕೆಯ ಹಾದಿಯಲ್ಲಿದ್ದಾರೆ. ಬಹುತೇಕ ಸಣ್ಣ ವರ್ತಕರು ಮತ್ತು ವಹಿವಾಟು ಸಂಬಂಧಿತರಿಗೆ ಕೆಟ್ಟದಾಗಿದೆ. ಇದಕ್ಕೆ ತದ್ವಿರುದ್ಧ ಎಂಬಂತೆ ಮತ್ತೊಂದು ಗುಂಪು ಎಂದಿಗಿಂತಲೂ ಉತ್ತಮವಾಗಿದೆ ಮತ್ತು ಇನ್ನೊಂದು ಗುಂಪು ಹತಾಶಯ ಗಡಿಯಲ್ಲಿದ್ದಾರೆ ಎಂದು ಅವರು ಹೇಳಿದ್ದರು. ಈ ತಿಂಗಳ ಆರಂಭದಲ್ಲಿ ಅಮೆರಿಕ ಅಧ್ಯಕ್ಷೀಯ ಅಭ್ಯರ್ಥಿ ಜೋ ಬಿಡೆನ್ ಅವರು, 'ಡೊನಾಲ್ಡ್ ಟ್ರಂಪ್ ಅವರ ಆಡಳಿತ ವೈಖರಿ ಅಸಾಮಾನ್ಯ‘ಕೆ-ಆಕಾರ ’ಚೇತರಿಕೆಗೆ ಕಾರಣ'ವೆಂದು ಆರೋಪಿಸಿದ್ದರು.