ನವದೆಹಲಿ: ತೀವ್ರವಾದ ಆರ್ಥಿಕ ಸಂಕಷ್ಟದಿಂದ ನಲುಗಿ ಹೋಗಿ ದೇಶಿಯ ಹಾಗೂ ಅಂತಾರಾಷ್ಟ್ರೀಯ ಮಾರ್ಗಗಳಲ್ಲಿ ತನ್ನ ಹಾರಾಟ ಸ್ಥಗಿತಗೊಳಿಸಿದ್ದ ಜೆಟ್ ಏರ್ವೇಸ್, ನೆದರ್ಲೆಂಡ್ ಮೂಲದ ಕಂಪನಿಯ ಪಾಲಾಗಲಿದೆ.
ಪಡೆದ ಸಾಲ ಮರಳಿಸಲಾಗದೆ ದಿವಾಳಿಯಾದ ಜೆಟ್, ಕಳೆದ 25 ವರ್ಷಗಳ ಕಾಲ ವಿಮಾನ ಸೇವೆಯನ್ನು ಒದಗಿಸಿತ್ತು. 2019ರ ಏಪ್ರಿಲ್ನಿಂದ ತನ್ನ ಸೇವೆಯನ್ನು ಸ್ಥಗಿತಗೊಳಿಸಿ ದಿವಾಳಿ ಸಂಹಿತೆ ಘೋಷಣೆ ಪ್ರಕ್ರಿಯೆಯಲ್ಲಿ ನಿರತವಾಗಿದೆ.
ನಿಯಂತ್ರಕ ಫೈಲಿಂಗ್ ಪ್ರಕಾರ, ದಿವಾಳಿಯಾದ ಜೆಟ್ ಏರ್ವೇಸ್ ವಿಮಾನ ಸಂಸ್ಥೆಯು ನೆದರ್ಲಾಂಡ್ ಮೂಲದ ಕೆಎಲ್ಎಂ ರಾಯಲ್ ಡಚ್ ಏರ್ಲೈನ್ಸ್ಗೆ ಮಾರಾಟ ಮಾಡಲು ಯೋಜನೆ ರೂಪಿಸಲಾಗಿದೆ ಎಂದು ತಿಳಿಸಿದೆ.
ಜೆಟ್ ಏರ್ವೇಸ್ ವ್ಯವಹಾರಗಳನ್ನು ನಿರ್ವಹಿಸುವ ದಿವಾಳಿತನ ರೆಸಲ್ಯೂಷನ್ ವೃತ್ತಿಪರರು ಕಂಪನಿಯ ರೆಸಲ್ಯೂಶನ್ ಮತ್ತು ಅದರ ಷೇರು ಹೋಲ್ಡರ್ಗಳಿಗೆ ಗರಿಷ್ಠ ಮೌಲ್ಯ ಒದಗಿಸಲು ವಿವಿಧ ಆಯಾಮಗಳಿಂದ ಪರಿಶೋಧನೆ ನಡೆಸುತ್ತಿದ್ದಾರೆ ಎಂದು ಫೈಲಿಂಗ್ನಲ್ಲಿ ತಿಳಿಸಿದೆ.
ಈ ಹಂತದಲ್ಲಿ ಕಂಪನಿ ಮತ್ತು ಡಚ್ ಟ್ರಸ್ಟಿ 2020ರ ಜನವರಿ 13ರಂದು 'ಕೊನಿಂಕ್ಲಿಜ್ಕೆ ಲುಚಾಟ್ವಾರ್ಟ್ ಮಾಟ್ಚಪ್ಪಿಜ್ ಎನ್ವಿ' ಜತೆಗೆ ಷರತ್ತುಬದ್ಧ ಮಾರಾಟ ಮತ್ತು ಖರೀದಿ ಒಪ್ಪಂದವನ್ನು ಮಾಡಿಕೊಂಡಿವೆ.
ಪ್ರಸ್ತಾವಿತ ನಿರ್ಣಯವು ಭಾರತೀಯ ಕಾನೂನು ಮತ್ತು ಡಚ್ ಕಾನೂನುಗಳ ಅಡಿಯಲ್ಲಿ ಶಾಸನಬದ್ಧ ಮತ್ತು ನಿಯಂತ್ರಕ ಅನುಮತಿಗಳು ಸೇರಿದಂತೆ ಹಲವು ಷರತ್ತುಗಳಿಗೆ ಒಳಪಟ್ಟಿದೆ ಎಂದು ಫೈಲಿಂಗ್ ಹೇಳಿದೆ.