ನವದೆಹಲಿ :ದಾಖಲೆ ಪ್ರಮಾಣದ ತೈಲ ಬೆಲೆಗಳ ಏರಿಕೆ ಮಧ್ಯೆಯೂ ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ವ್ಯಾಪ್ತಿಯಡಿ ಕಚ್ಚಾ ತೈಲ,ಪೆಟ್ರೋಲ್, ಡೀಸೆಲ್, ಜೆಟ್ ಇಂಧನ (ಎಟಿಎಫ್) ಮತ್ತು ನೈಸರ್ಗಿಕ ಅನಿಲವನ್ನು ತರಲು ಯಾವುದೇ ಪ್ರಸ್ತಾಪವಿಲ್ಲ ಎಂದು ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಹೇಳಿದ್ದಾರೆ.
ತೆರಿಗೆಗಳು ಕಡಿಮೆ ಆಗಿಲ್ಲವಾದರೂ ಬೇಡಿಕೆಯ ಚೇತರಿಕೆಯಿಂದಾಗಿ ಜಾಗತಿಕ ತೈಲ ಬೆಲೆ ಏರಿಕೆಯು ಪೆಟ್ರೋಲ್ ಮತ್ತು ಡೀಸೆಲ್ ಸಾರ್ವಕಾಲಿಕ ಗರಿಷ್ಠ ಮಟ್ಟಕ್ಕೆ ಕೊಂಡೊಯ್ದಿವೆ. ಇದರಿಂದಾಗಿ ಜಿಎಸ್ಟಿಯಡಿ ತೈಲ ದರ ತರುವಂತೆ ಬೇಡಿಕೆ ಬರುತ್ತದೆ.
ಪ್ರಸ್ತುತ, ಕಚ್ಚಾ ಪೆಟ್ರೋಲಿಯಂ, ಪೆಟ್ರೋಲ್, ಡೀಸೆಲ್, ಎಟಿಎಫ್ ಮತ್ತು ನೈಸರ್ಗಿಕ ಅನಿಲವನ್ನು ಜಿಎಸ್‌ಟಿ ಅಡಿಯಲ್ಲಿ ತರಲು ಯಾವುದೇ ಪ್ರಸ್ತಾಪವಿಲ್ಲ ಎಂದು ಲೋಕಸಭೆಯಲ್ಲಿ ಪ್ರಶ್ನೆಯೊಂದಕ್ಕೆ ಲಿಖಿತ ಉತ್ತರದಲ್ಲಿ ಸೀತಾರಾಮನ್ ತಿಳಿಸಿದ್ದಾರೆ.
ಪೆಟ್ರೋಲಿಯಂ ಕಚ್ಚಾ, ಹೈಸ್ಪೀಡ್ ಡೀಸೆಲ್, ಮೋಟಾರ್ ಸ್ಪಿರಿಟ್ (ಸಾಮಾನ್ಯ ಪೆಟ್ರೋಲ್), ನೈಸರ್ಗಿಕ ಅನಿಲ ಮತ್ತು ಎಟಿಎಫ್ ಮೇಲೆ ಸರಕು ಮತ್ತು ಸೇವಾ ತೆರಿಗೆ ವಿಧಿಸುವ ದಿನಾಂಕವನ್ನು ಜಿಎಸ್‌ಟಿ ಮಂಡಳಿ ಶಿಫಾರಸು ಮಾಡುತ್ತದೆ ಎಂಬುದನ್ನು ಕಾನೂನು ಸೂಚಿಸುತ್ತದೆ ಎಂದು ಸಂಸತ್ತಿನಲ್ಲಿ ಉಲ್ಲೇಖಿಸಿದರು.
ಇದನ್ನೂ ಓದಿ: ಕೋವಿಡ್ ಪುನರುತ್ಥಾನಕ್ಕೆ ಹೂಡಿಕೆದಾರರ ತಲ್ಲಣ : ಗೂಳಿ ಮೇಲೆ ಕರಡಿ ಸವಾರಿ!
ಈವರೆಗೆ ರಾಜ್ಯಗಳನ್ನು ಪ್ರತಿನಿಧಿಸುವ ಜಿಎಸ್‌ಟಿ ಮಂಡಳಿ, ಈ ಸರಕುಗಳನ್ನು ಜಿಎಸ್‌ಟಿ ಅಡಿ ಸೇರಿಸಲು ಯಾವುದೇ ಶಿಫಾರಸು ಮಾಡಿಲ್ಲ. ಈ ಐದು ಪೆಟ್ರೋಲಿಯಂ ಉತ್ಪನ್ನಗಳನ್ನು ಸೇರ್ಪಡೆಗೊಳಿಸುವ ವಿಚಾರವನ್ನು ಮಂಡಳಿ ಪರಿಗಣಿಸಬಹುದು. ಆದಾಯದ ಸೇರ್ಪಡೆ ಸೇರಿ ಈ ಸಂಬಂಧಿತ ಎಲ್ಲಾ ಅಂಶಗಳನ್ನು ಗಮನದಲ್ಲಿಟ್ಟುಕೊಳ್ಳುವುದು ಸೂಕ್ತವೆಂದು ಅದು ಪರಿಗಣಿಸುತ್ತದೆ ಎಂದರು.
ಜಿಎಸ್‌ಟಿಯಲ್ಲಿ ತೈಲ ಉತ್ಪನ್ನಗಳನ್ನು ಸೇರಿಸುವುದರಿಂದ ಕಂಪನಿಗಳು ಇನ್‌ಪುಟ್‌ನಲ್ಲಿ ಪಾವತಿಸಿದ ತೆರಿಗೆ ನಿಗದಿಪಡಿಸಲು ಸಹಾಯ ಮಾಡುತ್ತದೆ. ಮಾತ್ರವಲ್ಲದೆ ದೇಶದ ಇಂಧನಗಳ ಮೇಲಿನ ತೆರಿಗೆಯಲ್ಲಿ ಏಕರೂಪತೆ ಬರಲಿದೆ.
ಪ್ರತ್ಯೇಕ ಪ್ರಶ್ನೆಯೊಂದಕ್ಕೆ ಹಣಕಾಸು ಸಚಿವಾಲಯದ ರಾಜ್ಯ ಖಾತೆ ಮಂತ್ರಿ ಅನುರಾಗ್ ಸಿಂಗ್ ಠಾಕೂರ್ ಅವರು, ಪೆಟ್ರೋಲ್‌ನ ಅಬಕಾರಿ ಸುಂಕವು ಒಂದು ವರ್ಷದ ಹಿಂದೆ ಪ್ರತಿ ಲೀಟರ್‌ಗೆ 19.98 ರೂ. ಮತ್ತು ಈಗ 32.9 ರೂ. ಆಗಿದೆ. ಅದೇ ರೀತಿ ಡೀಸೆಲ್‌ನಲ್ಲಿ ಅಬಕಾರಿ ಸುಂಕ 15.83 ರೂ.ಯಿಂದ 31.8 ರೂ.ಗೆ ಏರಿಸಲಾಗಿದೆ ಎಂದರು.
ಪ್ರಸಕ್ತ ಹಣಕಾಸಿನ ಸ್ಥಿತಿ ಗಮನದಲ್ಲಿ ಇರಿಸಿಕೊಂಡು ಮೂಲಸೌಕರ್ಯ ಮತ್ತು ಇತರ ಅಭಿವೃದ್ಧಿ ವೆಚ್ಚಗಳ ಸಂಪನ್ಮೂಲಗಳನ್ನು ಉತ್ಪಾದಿಸಲು ಅಬಕಾರಿ ಸುಂಕದ ದರ ನಿಗದಿಪಡಿಸಲಾಗಿದೆ ಎಂದು ಹೇಳಿದರು.