ನವದೆಹಲಿ: ಜಾಗತಿಕವಾಗಿ ಜನೌಷಧ ತಯಾರಿಕೆ ಮತ್ತು ರಫ್ತು ವ್ಯವಹಾರದಲ್ಲಿ ಭಾರತ ಅತಿ ದೊಡ್ಡ ರಾಷ್ಟ್ರಗಳಲ್ಲಿ ಒಂದಾಗಿದೆ ಎಂದು ಕೇಂದ್ರ ರಾಸಾಯನಿಕ ಮತ್ತು ರಸಗೊಬ್ಬರ ಖಾತೆ ಸಚಿವ ಡಿ.ವಿ. ಸದಾನಂದಗೌಡ ತಿಳಿಸಿದ್ದಾರೆ.
ಕೋವಿಡ್- 19ರ ಆರಂಭದ ಕಾಲದಲ್ಲಿ ಗಂಭೀರ ಪ್ರಕರಣಗಳ ಚಿಕಿತ್ಸಾ ಶಿಷ್ಟಾಚಾರದಲ್ಲಿ ಎಚ್.ಸಿ.ಕ್ಯು ಮತ್ತು ಅಜಿತ್ರೋಮೈಸಿನ್ ಅನ್ನು ಔಷಧವಾಗಿ ಗುರುತಿಸಲಾಗಿತ್ತು. ಭಾರತ ಈ ಔಷಧಗಳನ್ನು ವಿಶ್ವದ 120ಕ್ಕೂ ಹೆಚ್ಚು ರಾಷ್ಟ್ರಗಳಿಗೆ ಪೂರೈಕೆ ಮಾಡಿತು. ಅಲ್ಲಿಂದ ಭಾರತ ಅತ್ಯಂತ ವಿಶ್ವಾಸಾರ್ಹ ಔಷಧ ಪೂರೈಕೆದಾರ ಎಂಬ ಗೌರವಕ್ಕೆ ಪಾತ್ರವಾಯಿತು ಎಂದರು.
ಯುಎಸ್ ಮತ್ತು ಯುರೋಪಿನಂತಹ ಉನ್ನತ ಗುಣಮಟ್ಟವನ್ನು ಅನುಸರಿಸುವ ದೇಶಗಳು ಸೇರಿದಂತೆ ವಿವಿಧ ದೇಶಗಳಿಗೆ 20 ಶತಕೋಟಿ ಡಾಲರ್ ಮೌಲ್ಯದ ಔಷಧ ಉತ್ಪನ್ನಗಳ ರಫ್ತು ಹೊಂದಿರುವ ಭಾರತ, ಅಮೆರಿಕದ ಹೊರಗೆ ಯುಎಸ್-ಎಫ್.ಡಿ.ಎ ಕಂಪ್ಲೈಂಟ್ ಔಷಧ ಘಟಕಗಳನ್ನು (ಎಪಿಐಗಳು ಸೇರಿದಂತೆ 262ಕ್ಕಿಂತ ಹೆಚ್ಚು) ಹೊಂದಿರುವ ಏಕೈಕ ದೇಶವಾಗಿದೆ ಎಂದು ಮಾಹಿತಿ ನೀಡಿದರು.
ಫಿಕ್ಕಿ ಆಯೋಜಿಸಿದ್ದ ಲೀಡ್ಸ್ 2020 ವೇಳೆ ಲ್ಯಾಟಿನ್ ಅಮೆರಿಕ ಮತ್ತು ಕೆರೇಬಿಯನ್ ವರ್ಚ್ಯುವಲ್ ಅಧಿವೇಶನ ಉದ್ದೇಶಿಸಿ ಮಾತನಾಡಿದ ಅವರು, ಭಾರತದ ಔಷಧ ವಲಯ 2024ರ ಹೊತ್ತಿಗೆ 65 ಶತಕೋಟಿ ಡಾಲರ್ ಕೈಗಾರಿಕೆಯಾಗಿ ವೃದ್ಧಿಸಬಲ್ಲುದಾಗಿದೆ ಎಂದರು.
ನಾವು ಇತ್ತೀಚೆಗೆ ಏಳು ಮೆಗಾ ಪಾರ್ಕ್ಗಳ ಅಭಿವೃದ್ಧಿಗೆ ಯೋಜನೆಗಳನ್ನು ಪ್ರಾರಂಭಿಸಿದ್ದೇವೆ. ದೇಶಾದ್ಯಂತ ಮೂರು ಬೃಹತ್ ಔಷಧ ಉದ್ಯಾನಗಳು ಮತ್ತು ನಾಲ್ಕು ವೈದ್ಯಕೀಯ ಸಾಧನಗಳ ಉದ್ಯಾನಗಳು. ಹೊಸ ಉತ್ಪಾದಕರು ಉತ್ಪಾದನೆ ಸಂಪರ್ಕಿತ ಪ್ರೋತ್ಸಾಹಕ (ಪಿಎಲ್.ಐ) ಯೋಜನೆಗೆ ಅರ್ಹರಾಗಿರುತ್ತಾರೆ, ಅವರು ತಮ್ಮ ಮಾರಾಟದ ಆಧಾರದ ಮೇಲೆ ಮೊದಲ 5 - 6 ವರ್ಷಗಳವರೆಗೆ ಆರ್ಥಿಕ ಪ್ರೋತ್ಸಾಹಕ್ಕೆ ಅರ್ಹರಾಗಿರುತ್ತಾರೆ ಎಂದು ಹೇಳಿದರು.
ಔಷಧ ಕ್ಷೇತ್ರದಲ್ಲಿ ಹೂಡಿಕೆ ಮಾಡಲು ಮತ್ತು ಭಾರತದಲ್ಲಿ ಉತ್ಪಾದನಾ ನೆಲೆಯನ್ನು ಸ್ಥಾಪಿಸಲು ಇದು ಬಹಳ ಉತ್ತಮ ಸಮಯ ಇದಾಗಿದೆ. ಜಂಟಿ ಸಹಯೋಗದ ಮೂಲಕವೂ ಯಾರಾದರೂ ಭಾರತ ಮಾರುಕಟ್ಟೆ ಪ್ರವೇಶಿಸಬಹುದು. ನೀವು ಔಷಧ ಕ್ಷೇತ್ರಕ್ಕೆ ಸಂಬಂಧಪಟ್ಟಂತೆ ಭಾರತದ ಮೂಲಕ ದೇಶೀಯ ಭಾರತೀಯ ಮಾರುಕಟ್ಟೆ, ಯುಎಸ್, ಜಪಾನ್, ಐರೋಪ್ಯ ಔಕ್ಕೂಟ ಮತ್ತು ಆಗ್ನೇಯ ಏಷ್ಯಾದಂತಹ ದೊಡ್ಡ ಮಾರುಕಟ್ಟೆಗಳಿಗೆ ಪ್ರವೇಶವನ್ನು ಪಡೆಯಬಹುದು. ಭಾರತೀಯ ಔಷಧ ಕ್ಷೇತ್ರದ ಬಗ್ಗೆ ಆಸಕ್ತಿ ಇರುವ ಯಾರು ಬೇಕಾದರೂ ತಮ್ಮ ಕಚೇರಿಯನ್ನು ಸಂಪರ್ಕಿಸಬಹುದು, ನಾವು ಎಲ್ಲ ಸೌಲಭ್ಯ ಒದಗಿಸುತ್ತೇವೆ ಮತ್ತು ಸಹಾಯ ಹಸ್ತ ನೀಡುತ್ತೇವೆ ಎಂದು ಹೇಳಿದರು.