ಲಂಡನ್:ಶಿಖರ್ ಧವನ್ ಶತಕ ಹಾಗೂ ಬೌಲರ್ಗಳ ಉತ್ತಮ ಪ್ರದರ್ಶನದ ನೆರವಿನಿಂದ ಹಾಲಿ ಚಾಂಪಿಯನ್ ಆಸ್ಟ್ರೇಲಿಯಾ ವಿರುದ್ಧ 36 ರನ್ಗಳಿಂದ ಜಯ ಸಾಧಿಸಿದೆ. ಈ ಮೂಲಕ ವಿಶ್ವಕಪ್ನಲ್ಲಿ ಭಾರತ ತಂಡ ಸತತ ಎರಡನೇ ಜಯ ದಾಖಲಿಸಿದೆ.
ಟಾಸ್ ಗೆದ್ದು ಬ್ಯಾಟಿಂಗ್ ನಡೆಸಿದ ಟೀಂ ಇಂಡಿಯಾ 50 ಓವರ್ಗಳಲ್ಲಿ 352 ರನ್ಗಳಿಸಿತ್ತು. ಆರಂಭಿಕ ಬ್ಯಾಟ್ಸ್ಮನ್ ಧವನ್ 117, ಕೊಹ್ಲಿ 82, ರೋಹಿತ್ 57, ಪಾಂಡ್ಯ 48 ರನ್ ಗಳಿಸಿ ಬೃಹತ್ ಮೊತ್ತ ಕಲೆ ಹಾಕಲು ನೆರವಾಗಿದ್ದರು.
353 ರನ್ಗಳ ಬೃಹತ್ ಮೊತ್ತ ಬೆನ್ನತ್ತಿದ ಆಸ್ಟ್ರೇಲಿಯಾ ತಂಡ 50 ಓವರ್ಗಳಲ್ಲಿ 316 ರನ್ಗಳಿಗೆ ಆಲೌಟ್ ಆಗುವ ಮೂಲಕ 36 ರನ್ಗಳಿಂದ ಸೋಲೊಪ್ಪಿಕೊಂಡಿತು. ಆರಂಭಿಕರಾಗಿ ಕಣಕ್ಕಿಳಿದ ವಾರ್ನರ್ ನಿಧಾನಗತಿ ಆಟದ ಮೊರೆ ಹೋಗಿ 84 ಎಸೆತಗಳಲ್ಲಿ 54 ರನ್ ಗಳಿಸಿದರು. ಇವರು ಔಟಾಗುವ ಮುನ್ನ ನಾಯಕ ಫಿಂಚ್ (36) ಜೊತೆ ಸೇರಿ ಮೊದಲ ವಿಕೆಟ್ಗೆ 61 ರನ್ಗಳ ಜೊತೆಯಾಟ ನೀಡಿದರು. ಫಿಂಚ್ ರನ್ಔಟ್ ಬಲೆಗೆ ಬಿದ್ದರೆ, ವಾರ್ನರ್ ಚಹಾಲ್ ಸ್ಪಿನ್ ಮೋಡಿಗೆ ಬಲಿಯಾದರು.
ಇವರಿಬ್ಬರ ಪತನದ ನಂತರ ಸ್ಮಿತ್(69) ಉಸ್ಮಾನ್ ಖವಾಜ(42) ಜೊತೆಗೂಡಿ ನಾಲ್ಕನೇ ವಿಕೆಟ್ ಜೊತೆಯಾಟದಲ್ಲಿ 69 ರನ್ ಸೇರಿಸಿದರು. ಈ ಹಂತದಲ್ಲಿ ತಮ್ಮ ಎರಡನೇ ಸ್ಪೆಲ್ನಲ್ಲಿ ಕಣಕ್ಕಿಳಿದ ಬುಮ್ರಾ ಖಾವಾಜರನ್ನು ಕ್ಲೀನ್ ಬೌಲ್ಡ್ ಮಾಡಿದರು. 70 ಎಸೆತಗಳಲ್ಲಿ 69 ರನ್ಗಳಿಸಿ ಉತ್ತಮವಾಗಿ ಆಡುತ್ತಿದ್ದ ಸ್ಮಿತ್, ಭುವನೇಶ್ವರ್ ಬೌಲಿಂಗ್ನಲ್ಲಿ ಎಲ್ಬಿ ಬಲೆಗೆ ಬಿದ್ದರು. ಅದೇ ಓವರ್ನಲ್ಲೇ ಆಲ್ರೌಂಡರ್ ಸ್ಟೋಯ್ನಿಸ್ ಡಕ್ ಔಟಾದರು. ಇನ್ನು ಆಸೀಸ್ನ ಏಕೈಕ ಭರವಸೆಯಾಗಿದ್ದ ಮ್ಯಾಕ್ಸ್ವೆಲ್ ಕೂಡ ಹೆಚ್ಚು ಹೊತ್ತು ನಿಲ್ಲಲಿಲ್ಲ. 14 ಎಸೆತಗಳಲ್ಲಿ 5 ಬೌಂಡರಿ ಮೂಲಕ 28 ರನ್ಗಳಿಸಿ ಸ್ಫೋಟಕ ಆಟದ ಮುನ್ಸೂಚನೆ ನೀಡಿದ್ದ ಅವರನ್ನು ಚಹಾಲ್ ಪೆವಿಲಿಯನ್ಗಟ್ಟಲು ಯಶಸ್ವಿಯಾದರು.
ಪ್ರಮುಖ ವಿಕೆಟ್ ಕಳೆದುಕೊಂಡ ಆಸೀಸ್ ತಂಡ ಕಡಿಮೆ ರನ್ಗಳಿಗೆ ಆಲೌಟ್ ಆಗಬುದು ಎಂಬ ನಿರೀಕ್ಷೆಯಲ್ಲಿದ್ದ ಭಾರತ ತಂಡಕ್ಕೆ ಕೊನೆಯಲ್ಲಿ ವಿಕೆಟ್ ಕೀಪರ್ ಅಲೆಕ್ಸ್ ಕ್ಯಾರಿ ಸ್ಫೋಟಕ ಆಟವಾಡಿ ತಲೆ ನೋವು ತಂದರು. ಆದರೆ ಕ್ಯಾರಿ ಒಂದು ಕಡೆ ಬೌಂಡರಿ ಮೇಲೆ ಬೌಂಡರಿ ಬಾರಿಸುತ್ತಿದ್ದರೆ, ಇತ್ತ ಬಾಲಂಗೋಚಿಗಳಾದ ಕೌಲ್ಟರ್ ನೈಲ್(4), ಕಮ್ಮಿನ್ಸ್ (8) ಸ್ಟಾರ್ಕ್(3) ಹಾಗೂ ಜಂಪಾ(1) ರ ವಿಕೆಟ್ ಪಡೆಯುವಲ್ಲಿ ಭಾರತೀಯ ಸ್ಟಾರ್ ಬೌಲರ್ಗಳಾದ ಬುಮ್ರಾ-ಭುವಿ ಜೋಡಿ ಯಶಸ್ವಿಯಾದರು. ತಂಡವನ್ನು ಸೋಲಿನ ಸುಳಿಯಿಂದ ತಪ್ಪಿಸುವುದಕ್ಕೇ ಹೋರಾಟ ನಡೆಸಿದ ಕ್ಯಾರಿ 35 ಎಸೆತಗಳಲ್ಲಿ 5 ಬೌಂಡರಿ, 1 ಸಿಕ್ಸರ್ ಸಹಿತ 55 ರನ್ಗಳಿಸಿ ಔಟಾಗದೆ ಉಳಿದುಕೊಂಡರು.
ಭಾರತದ ಪರ ಅದ್ಭುತ ಬೌಲಿಂಗ್ ದಾಳಿ ನಡೆಸಿದ ಚಹಾಲ್ 2, ಬುಮ್ರಾ ಹಾಗೂ ಭುವನೇಶ್ವರ್ ತಲಾ 3 ವಿಕೆಟ್ ಪಡೆದು ಆಂಗ್ಲರ ಗೆಲುವಿನ ಓಟಕ್ಕೆ ಬ್ರೇಕ್ ಹಾಕಿದರು. ಆಕರ್ಷಕ ಶತಕ ಬಾರಿಸಿದ ಶಿಖರ್ ಧವನ್ ಪಂದ್ಯಶ್ರೇಷ್ಠ ಪ್ರಶಸ್ತಿಗೆ ಭಾಜನರಾದರು.
ಶತಕದ 'ಶಿಖರ',ಕೊಹ್ಲಿ-ರೋಹಿತ್ ಅರ್ಧಶತಕ! ಆಸ್ಟ್ರೇಲಿಯಾಗೆ 353 ರನ್ ಟಾರ್ಗೆಟ್!