ಕೋಲ್ಕತಾ :ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ಬಾಲ್ ಸೈಡ್ಪಿಚ್ನಲ್ಲಿ ಬಿದ್ದಿತ್ತು. ಡಿಆರ್ಎಸ್ ನಿಯಮದ ಪ್ರಕಾರ ಮೈದಾನದ ಅಂಪೈರ್ ನೀಡಿದ್ದ ತೀರ್ಪನ್ನು ಪರಿಗಣನೆಗೆ ತೆಗೆದುಕೊಂಡು ರೋಹಿತ್ ಶರ್ಮಾರನ್ನು ಔಟ್ ಎಂದು ಘೋಷಿಸಿದ್ದರು. ಇದರಿಂದ ಹತಾಶೆಗೊಂಡ ರೋಹಿತ್ ಶರ್ಮಾ ನಾನ್ ಸ್ಟ್ರೈಕರ್‌ನ ಸ್ಟಂಪ್ಗಳನ್ನು ತಮ್ಮ ಬ್ಯಾಟ್ಗಳಿಂದ ಎಗರಿಸಿದ್ದರು. ಈಗ ಅದೇ ಕಾರಣಕ್ಕೆ ಸಂಕಷ್ಟಕ್ಕೆ ಗುರಿಯಾಗಿದ್ದಾರೆ.
ನಿನ್ನೆ ಕೋಲ್ಕತಾದ ಈಡನ್ ಗಾರ್ಡನ್ನಲ್ಲಿ ನಡೆದ ಪಂದ್ಯದಲ್ಲಿ ಪ್ಲೇಆಫ್ಗೆ ತಲುಪಲು ಇದೇ ಕೊನೆಯ ಅವಕಾಶವಾಗಿದ್ದ ಕೆಕೆಆರ್ ಮೊದಲು ಬ್ಯಾಟಿಂಗ್ ನಡೆಸಿ 232 ರನ್ಗಳ ಬೃಹತ್ ಮೊತ್ತ ಕಲೆ ಹಾಕಿತ್ತು.
233 ರನ್ಗಳ ಗುರಿ ಬೆನ್ನತ್ತಿದ ಮುಂಬೈ ಇಂಡಿಯನ್ಸ್ 2ನೇ ಓವರ್ನಲ್ಲಿ ಡಿಕಾಕ್ ವಿಕೆಟ್ ಕಳೆದುಕೊಂಡು ಸಂಕಷ್ಟಕ್ಕೆ ತುತ್ತಾಗಿತ್ತು. 4ನೇ ಓವರ್ನಲ್ಲಿ ರೋಹಿತ್ ಎಲ್ಬಿ ಬಲೆಗೆ ಬಿದ್ದರು. ರೋಹಿತ್ ಡಿಆರ್ಎಸ್ ಮೊರೆ ಹೋದರು. ಇದರಲ್ಲಿ ಬೌಲರ್ ಎಸೆದ ಬಾಲ್ ಸೈಡ್‌ಪಿಚ್ ಆಗಿತ್ತು. ಆದರೆ, ಆನ್ಫೀಲ್ಡ್ ಅಂಪೈರ್ ಔಟ್ ನೀಡಿದ್ದರಿಂದ ರೋಹಿತ್ ಔಟಾದರು. ಇದರಿಂದ ಕೋಪಗೊಂಡ ರೋಹಿತ್ ಪೆವಿಲಿಯನ್ಗೆ ತೆರಳುವ ಮುನ್ನ ನಾನ್ಸ್ಟ್ರೈಕರ್ ಸ್ಟಂಪ್ಗಳನ್ನು ತಮ್ಮ ಬ್ಯಾಟ್ನಿಂದ ಗುದ್ದಿ ಹೋದರು.
ರೋಹಿತ್ ಐಪಿಎಲ್ ಕೋಡ್ ಆಫ್ ಕಂಡಕ್ಟ್ 2.2 ನಿಯಮವನ್ನು ಉಲ್ಲಂಘನೆ ಮಾಡಿ ಮೈದಾನದಲ್ಲಿ ಅನುಚಿತ ವರ್ತನೆ ತೋರಿದ್ದರಿಂದ, ಪಂದ್ಯದ ಸಂಭಾವನೆಯಲ್ಲಿ ಶೇ.15ರಷ್ಟನ್ನು ದಂಡವಾಗಿ ವಿಧಿಸಲಾಗಿದೆ.
ಒಂದು ಕಡೆ ಸೋಲು ಕಂಡು ಬೇಸರದಲ್ಲಿದ್ದ ರೋಹಿತ್ ರೆಫ್ರಿ ದಂಡ ವಿಧಿಸಿರುವುದು ಗಾಯದ ಮೇಲೆ ಬರೆ ಎಳೆದಂತಾಗಿದೆ. ಆದರೆ, ಈ ಸೋಲು ಮುಂಬೈ ಇಂಡಿಯನ್ಸ್ಗೆ ದೊಡ್ಡ ನಷ್ಟವನ್ನೇನು ಉಂಟು ಮಾಡಿಲ್ಲ. ಇನ್ನೂ 2 ಪಂದ್ಯಗಳಿದ್ದು, ಅದರಲ್ಲಿ ಒಂದು ಪಂದ್ಯ ಗೆದ್ದರೆ ಪ್ಲೇ ಆಫ್ ಹಂತಕ್ಕೆ ತಲುಪುವುದು ಖಚಿತವಾಗಲಿದೆ.
233ರನ್ ಟಾರ್ಗೆಟ್ ಪಡೆದ ಮುಂಬೈ 58ಕ್ಕೆ 4ವಿಕೆಟ್ ಕಳೆದುಕೊಂಡು ಹೀನಾಯ ಸೋಲು ಕಾಣಬಹುದೆಂದು ಚಿಂತಿಸಲಾಗಿತ್ತು. ಆದರೆ, ಹಾರ್ದಿಕ್ ಪಾಂಡ್ಯ ಕೆಚ್ಚೆದೆಯ ಆಟವಾಡಿ ಕೇವಲ 34 ಎಸೆತಗಳಲ್ಲಿ 91 ರನ್ ಸಿಡಿಸಿ ಬೌಂಡರಿ ಸಿಕ್ಸರ್ಗಳ ಸುರಿಮಳೆ ಸುರಿಸಿದರು. ಪಾಂಡ್ಯ ಅಬ್ಬರದ ಇನ್ನಿಂಗ್ಸ್ನಲ್ಲಿ 6 ಬೌಂಡರಿ 9 ಸಿಕ್ಸರ್ ಒಳಗೊಂಡಿತ್ತು.