ಮುಂಬೈ: ಪ್ಲೆ ಆಫ್ಗೆ ತಲುಪಲು ಗೆಲ್ಲಲೇಬೆಕಾದ ಪಂದ್ಯದಲ್ಲಿ ನಿಧಾನಗತಿ ಆಟಕ್ಕೆ ಮೊರೆ ಹೋಗಿ ಕೆಕೆಆರ್ ಸೋಲಿಗೆ ಪರೋಕ್ಷವಾಗಿ ಕಾರಣರಾದ ರಾಬಿನ್ ಉತ್ತಪ್ಪ ವಿರುದ್ಧ ಅಭಿಮಾನಿಗಳು ಸಾಮಾಜಿಕ ಜಾಲತಾಣಗಳಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂಬೈ ವಿರುದ್ಧ ಮೂರನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಇಳಿದ ರಾಬಿನ್ ಉತ್ತಪ್ಪ 20 ಓವರ್ ತನಕ ಕ್ರೀಸ್ನಲ್ಲಿದ್ದು 47 ಎಸೆತಗಳಲ್ಲಿ ಕೇವಲ 40 ರನ್ಗಳಿಸಿ ಒಂದು ಎಸೆತ ಇರುವಾಗ ಔಟಾದರು. ಈ ಪಂದ್ಯ ಕೆಕೆಆರ್ಗೆ ಬಹುಮುಖ್ಯವಾಗಿದ್ದರೂ ಈ ರೀತಿ ನಿದಾನಗತಿ ಆಟ ಪ್ರದರ್ಶಿಸಿದಕ್ಕೆ ಉತ್ತಪ್ಪ ವಿರುದ್ಧ ಸಾಮಾಜಿಕ ಜಾಲಾತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ.
ಹೊಡಿಬಡಿ ಆಟಕ್ಕೆ ಪ್ರಸಿದ್ದರಾಗಿದ್ದ ಉತ್ತಪ್ಪ ನಿನ್ನೆಯ ಪಂದ್ಯದಲ್ಲಿ ಬರೋಬ್ಬರಿ 25 ಬಾಲ್ಗಳಲ್ಲಿ ಡಾಟ್ ಮಾಡಿದ್ದರು. ತಂಡದ ಪ್ರಮುಖ ಆಟಗಾರರಾದ ಲಿನ್, ರಸೆಲ್ ಹಾಗೂ ಕಾರ್ತಿಕ್ ವಿಕೆಟ್ ಕಳೆದುಕೊಂಡ ನಂತರ ತಂಡದ ಜವಾಬ್ದಾರಿಯುತ ಬ್ಯಾಟ್ಸ್ಮನ್ ಆಗಿ ಆಡಬೇಕಿದ್ದ ಉತ್ತಪ್ಪ ತಮ್ಮ ಕೊನೆಯ ಓವರ್ವರೆಗೂ ರನ್ಗಳಿಸಲು ಪರದಾಡಿದರು.
ಇದಲ್ಲದೇ ಮೆಕ್ಗ್ಲೆಹಾನ್ ಎಸೆದ 11ನೇ ಓವರ್ ಮೇಡನ್ ಮಾಡಿಕೊಂಡ ರಾಬಿನ್ ಮೊದಲ 21 ಎಸೆತಗಳಲ್ಲಿ ಕೇವಲ 9 ರನ್ಗಳಿಸಿ ಕೆಕೆಆರ್ಗೆ ಒತ್ತಡ ತಂದಿಟ್ಟರು. ಇದೇ ಸಂದರ್ಭದಲ್ಲಿ ಕಾರ್ತಿಕ್,ರಸೆಲ್ ಕೂಡ ವಿಕೆಟ್ ಒಪ್ಪಿಸಿದ್ದು ಸ್ಪರ್ಧಾತ್ಮಕ ಮೊತ್ತಗಳಿಸುವ ಆಸೆಗೆ ಎಳ್ಳುನೀರು ಬಿಟ್ಟಂತಾಯಿತು. ನಿತಿಸ್ ರಾಣಾ 13 ಎಸೆತಗಳಲ್ಲಿ 3 ಸಿಕ್ಸರ್ ಸಿಡಿಸಿ 26 ರನ್ಗಳಿಸಿ ತಂಡದ ಮೊತ್ತ ಹಿಗ್ಗಿಸಲು ಪ್ರಯತ್ನ ಪಟ್ಟರಾದರೂ ಆ ವೇಳೆಗಾಗಲೆ ಸಮಯ ಮೀರಿದ್ದರಿಂದ ದೊಡ್ಡ ಹೊಡೆತಕ್ಕೆ ಕೈ ಹಾಕಿ ಔಟಾದರು.
ಐಪಿಎಲ್ನಲ್ಲಿ ಗರಿಷ್ಠ ರನ್ಗಳಿಸಿದವರ ಪಟ್ಟಿಯಲ್ಲಿ 5 ನೇ ಸ್ಥಾನದಲ್ಲಿರುವ ಉತ್ತಪ್ಪಗೆ ಈ ಆವೃತ್ತಿಯಲ್ಲಿ ತುಂಬಾ ಕೆಟ್ಟ ಪ್ರದರ್ಶನ ತೋರುವ ಮೂಲಕ ಬಾರಿ ಟೀಕೆಗೆ ಒಳಗಾಗಿದ್ದಾರೆ. ಅಲ್ಲದೇ ಇದೇ ಮೊದಲ ಬಾರಿಗೆ ಸೀಸನ್ವೊಂದರಲ್ಲಿ 300 ರನ್ಗಳಿಸಲು ಸಹಾ ವಿಫಲರಾಗಿರುವ ಉತ್ತಪ್ಪ ಸ್ಟ್ರೈಕ್ರೇಟ್ ಕೇವಲ 115, ಸಿಎಸ್ಕೆ ತಂಡದ ರಾಯುಡು ನಂತರ 12ನೇ ಆವೃತ್ತಿಯಲ್ಲಿ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿರುವ ಆಟಗಾರ ಎಂಬ ಕಳಂಕ ಕೂಡ ಹೊತ್ತುಕೊಂಡಿದ್ದಾರೆ.
ಉತ್ತಪ್ಪರ ಕಳಪೆ ಬ್ಯಾಟಿಂಗ್ನಿಂದ ಕೆಕೆಆರ್ ಅಭಿಮಾನಿಗಳು ಟೀಕೆ, ಆಕ್ರೋಶ ವ್ಯಕ್ತಪಡಿಸಿದರೆ, ಹೈದರಾಬಾದ್ ಅಭಿಮಾನಿಗಳು ಮಾತ್ರ ಪ್ಲೆ ಅಫ್ ತಲುಪಲು ಸಹಕರಿಸಿದ್ದಕ್ಕೆ ಧನ್ಯವಾದಗಳು ಎಂದು ಟ್ವಿಟರ್ನಲ್ಲಿ ಟ್ರೋಲ್ ಮಾಡುತ್ತಿದ್ದಾರೆ.