ಬೆಂಗಳೂರು:ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬೆಡ್ಗಳನ್ನು ಒದಗಿಸುವುದನ್ನು ಖಾತರಿ ಪಡಿಸಬೇಕು. ಆಯಾ ವಲಯಗಳ ಡಿಸಿಪಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿ ಬೆಡ್ಗಳ ವ್ಯವಸ್ಥೆ ಮಾಡಬೇಕು ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಸೂಚನೆ ನೀಡಿದ್ದಾರೆ.
ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ಬೆಂಗಳೂರು ಕೋವಿಡ್ ನಿರ್ವಹಣೆ ಕುರಿತಂತೆ ಬೆಂಗಳೂರು ಸಚಿವರ ವರ್ಚುಯಲ್ ಸಭೆ ನಡೆಯಿತು. ಸಭೆಯಲ್ಲಿ ಎಲ್ಲಾ ಸಚಿವರಿಂದ ಸಿಎಂ ಮಾಹಿತಿ ಪಡೆದುಕೊಂಡರು. ನಗರದಲ್ಲಿ ಈಗಾಗಲೇ ಆಕ್ಸಿಜನ್ ಪೂರೈಕೆ ಮತ್ತು ಔಷಧ ಕೊರತೆಯ ಸಮಸ್ಯೆ ಬಗೆಹರಿಸಲಾಗಿದೆ ಎಂದು ಆರೋಗ್ಯ ಸಚಿವ ಡಾ. ಸುಧಾಕರ್ ಸಿಎಂ ಯಡಿಯೂರಪ್ಪ ಅವರಿಗೆ ಮಾಹಿತಿ ನೀಡಿದರು. ಜೊತೆಗೆ ಲಸಿಕೆಗಳ ಕೊರತೆಯೂ ಇಲ್ಲ ಎಂದು ಸ್ಪಷ್ಟ ಪಡಿಸಿದರು.
ಎಲ್ಲ ಮಾಹಿತಿ ಆಲಿಸಿದ ಸಿಎಂ ಯಡಿಯೂರಪ್ಪ, ನಗರದಲ್ಲಿ ಫೀವರ್ ಕ್ಲಿನಿಕ್ಗಳನ್ನು ಬಲಪಡಿಸಿ, ಜ್ವರ, ಮತ್ತಿತರ ಲಕ್ಷಣ ಹೊಂದಿರುವವರ ಪರೀಕ್ಷೆ ಹಾಗೂ ಸೂಕ್ತ ಮಾರ್ಗದರ್ಶನ ನೀಡಬೇಕು. ಇದರಿಂದ ಅಗತ್ಯ ಇರುವವರಿಗೆ ಮಾತ್ರ ಆಸ್ಪತ್ರೆಗೆ ದಾಖಲಿಸಲು ಸಾಧ್ಯವಾಗುತ್ತದೆ. ಸಹಾಯವಾಣಿಗಳನ್ನು ಇನ್ನಷ್ಟು ಬಲಪಡಿಸಿ, ಸಾರ್ವಜನಿಕರ ಸಮಸ್ಯೆಗಳಿಗೆ ತ್ವರಿತವಾಗಿ ಸ್ಪಂದಿಸುವಂತೆ ಸೂಚಿಸಿದರು.
ಹೋಮ್ ಐಸೋಲೇಷನ್ನಲ್ಲಿ ಇರುವವರ ಚಿಕಿತ್ಸೆ, ಟೆಲಿ ಕನ್ಸಲ್ಟೇಷನ್ ಒದಗಿಸಲು ಹಾಗೂ ಅವರ ಮೇಲೆ ನಿಗಾ ವಹಿಸಲು ಆದ್ಯತೆ ನೀಡಬೇಕು. ಖಾಸಗಿ ಆಸ್ಪತ್ರೆಗಳು ಕೋವಿಡ್ ಚಿಕಿತ್ಸೆಗೆ ಬೆಡ್ಗಳನ್ನು ಒದಗಿಸುವುದನ್ನು ಖಾತರಿ ಪಡಿಸಬೇಕು. ಆಯಾ ವಲಯಗಳ ಡಿಸಿಪಿಗಳು ಆಸ್ಪತ್ರೆಗಳಿಗೆ ಭೇಟಿ ನೀಡಿ ಪರಿಶೀಲಿಸುವಂತೆ ಸಿಎಂ ಸೂಚಿಸಿದರು.
ನೋಡಲ್ ಅಧಿಕಾರಿಗಳು ಆಯಾ ವಲಯದ ಕೋವಿಡ್ ನಿರ್ವಹಣೆಗೆ ಸಂಪೂರ್ಣ ಜವಾಬ್ದಾರರು. ಅವರು ಎಲ್ಲ ಸಮಸ್ಯೆಗಳ ಕುರಿತು ಸ್ಪಂದಿಸಬೇಕು. ಆರೋಗ್ಯ ಸೇವೆಯಲ್ಲಿ ನಿರತರಾಗಿರುವ ವೈದ್ಯಕೀಯ, ಅರೆ ವೈದ್ಯಕೀಯ ಸಿಬ್ಬಂದಿಗೆ ಸ್ಥೈರ್ಯ ತುಂಬುವ ಕೆಲಸ ಮಾಡಬೇಕು ಎಂದು ಸಲಹೆ ನೀಡಿದರು.
ಚಿತಾಗಾರಗಳಿಗೆ ಶವ ಸಾಗಿಸುವ ಆ್ಯಂಬುಲೆನ್ಸ್ಗಳು ತಾಸುಗಟ್ಟಲೆ ಸರದಿಯಲ್ಲಿ ನಿಲ್ಲುವುದರಿಂದ ಶವಗಳನ್ನು ಸಾಗಿಸಲು ಆ್ಯಂಬುಲೆನ್ಸ್ಗಳ ಕೊರತೆ ಆಗಿರುವ ಹಿನ್ನೆಲೆಯಲ್ಲಿ ಶವಗಳನ್ನು ಇರಿಸಲು ಚಿತಾಗಾರಗಳಲ್ಲಿ ತಾತ್ಕಾಲಿಕ ವ್ಯವಸ್ಥೆ ಮಾಡಬೇಕು. ಕೋವಿಡ್ ನಿರ್ವಹಣೆಯಲ್ಲಿ ಸಾಧ್ಯ ಇರುವಲ್ಲಿ ಸ್ವಯಂ ಸೇವಕರ ನೆರವು ಪಡೆಯಬೇಕು ಎಂದು ಸಿಎಂ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ನಿರ್ಧರಿಸಲಾಯಿತು.
ಸಭೆಯಲ್ಲಿ ಉಪ ಮುಖ್ಯಮಂತ್ರಿ ಡಾ. ಸಿ.ಎನ್. ಅಶ್ವತ್ಥ ನಾರಾಯಣ, ಸಚಿವರಾದ ಆರ್. ಅಶೋಕ್, ಡಾ. ಕೆ. ಸುಧಾಕರ್, ಎಸ್. ಸುರೇಶ್ ಕುಮಾರ್, ವಿ.ಸೋಮಣ್ಣ, ಎಂ.ಟಿ. ಬಿ. ನಾಗರಾಜ್, ಎಸ್.ಟಿ.ಸೋಮಶೇಖರ್, ಕೆ. ಗೋಪಾಲಯ್ಯ, ಬಿಡಿಎ ಅಧ್ಯಕ್ಷ ಎಸ್.ಆರ್. ವಿಶ್ವನಾಥ್, ಸರ್ಕಾರದ ಮುಖ್ಯ ಕಾರ್ಯದರ್ಶಿ ಪಿ. ರವಿಕುಮಾರ್, ಆರೋಗ್ಯ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿ ಜಾವೇದ್ ಅಖ್ತರ್, ಬಿಬಿಎಂಪಿ ಮುಖ್ಯ ಆಯುಕ್ತ ಗೌರವ್ ಗುಪ್ತ ಮತ್ತು ಇತರ ಹಿರಿಯ ಅಧಿಕಾರಿಗಳು ಉಪಸ್ಥಿತರಿದ್ದರು.