ಕರ್ನಾಟಕ

karnataka

ETV Bharat / briefs

ಸಚಿವ ಸೋಮಶೇಖರ್ ಮಾನವೀಯ ಕಾರ್ಯ ಎಲ್ಲರಿಗೂ ಮಾದರಿ : ನಂಜಾವಧೂತ ಮಹಾಸ್ವಾಮೀಜಿ

ನಾವು ಭಾರತೀಯರು ನಮ್ಮ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಿನ ನಿತ್ಯ ಮಜ್ಜಿಗೆ ಸೇವನೆ, ಉತ್ತಮ ಆಹಾರವನ್ನು ಸೇವಿಸಬೇಕು. ನಾವು ಮನೋಸ್ಥೈರ್ಯದಿಂದ್ದರೆ ಮಾತ್ರ ಕೊರೊನಾವನ್ನು ಎಲ್ಲರೂ ಜಯಿಸಬಹುದು. ಹಾವು ಕಚ್ಚಿದವರೂ ಬದುಕುತ್ತಾರೆ. ಆದರೆ, ಭಯ ಅವರನ್ನು ಕೊಲ್ಲುತ್ತದೆ..

By

Published : May 21, 2021, 5:33 PM IST

bengaluru
bengaluru

ಬೆಂಗಳೂರು :ಯಶವಂತಪುರ ಕ್ಷೇತ್ರದ ಶಾಸಕರು, ಸಚಿವ ಎಸ್.ಟಿ. ಸೋಮಶೇಖರ್ ಎಲ್ಲರಿಗೂ ಮಾದರಿಯಾಗುವ ಕಾರ್ಯವನ್ನು ಮಾಡುತ್ತಿದ್ದಾರೆ. ಅವರ ಕಾರ್ಯವೈಖರಿ ನನಗೂ ಆಶ್ಚರ್ಯವನ್ನು ತಂದಿದೆ.

ಕ್ಷೇತ್ರದ ಜನರಿಗೆ ಈ ರೀತಿಯಾಗಿ ಬೆನ್ನೆಲುಬಾಗಿ ನಿಲ್ಲುವ ಮೂಲಕ ನಿಮಗೆ ನಾವಿದ್ದೇವೆ ಎಂಬ ಅಭಯವನ್ನು ನೀಡಿ ಆರ್ಥಿಕ ನೆರವು ನೀಡುತ್ತಿರುವುದು ಮಾದರಿ ಹಾಗೂ ಮಾನವೀಯ ಕ್ರಮವಾಗಿದೆ ಎಂದು ಸ್ಪಟಿಕಪುರಿ ಮಹಾಸಂಸ್ಥಾನ ಮಠದ ಪೀಠಾಧ್ಯಕ್ಷರಾದ ಶ್ರೀ ನಂಜಾವಧೂತ ಮಹಾಸ್ವಾಮೀಜಿ ಹೇಳಿದರು.

ತಮ್ಮ ತವರು ಯಶವಂತಪುರ ಕ್ಷೇತ್ರದ ನಗರ ಮಂಡಲದ ದೊಡ್ಡಬಿದರಕಲ್ಲು ವಾರ್ಡ್– 40ರಲ್ಲಿ ಸಹಕಾರ ಸಚಿವರಾದ ಎಸ್.ಟಿ. ಸೋಮಶೇಖರ್ ಕೋವಿಡ್-19ನಿಂದ ಮೃತಪಟ್ಟ 34 ಮಂದಿಯ ಕುಟುಂಬದವರಿಗೆ ವೈಯಕ್ತಿಕವಾಗಿ ನೀಡಲಿರುವ 1 ಲಕ್ಷ ರೂಪಾಯಿ ಸಹಾಯಧನ ವಿತರಣಾ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಶ್ರೀಗಳು ಮಾತನಾಡಿದರು. ತಮಗೆ ಎಷ್ಟು ಸಮಸ್ಯೆಯಾದರೂ ಜನರ ಪರ ನಿಲ್ಲುತ್ತೇವೆ ಎಂಬ ಮನೋಭಾವ ಎಲ್ಲರಿಗೂ ಇರುವುದಿಲ್ಲ. ಅದನ್ನು ಸಚಿವರಾದ ಸೋಮಶೇಖರ್ ಮಾಡಿ ತೋರಿಸಿದ್ದಾರೆ ಎಂದು ಶ್ಲಾಘನೆ ವ್ಯಕ್ತಪಡಿಸಿದರು.

ಭಾರತೀಯ ಆಹಾರ ಪದ್ಧತಿ ಪಾಲಿಸಿ :ಈಗಾಗಲೇ ಕೊಟ್ಟಿರುವ ವರದಿಗಳ ಪ್ರಕಾರ, ಬೆಡ್​ಗಳನ್ನು ಒದಗಿಸಲು ಎಲ್ಲ ರಾಜ್ಯಗಳಿಗೂ ಕಷ್ಟವಾಗಿದೆ. ಈಗ ಅವುಗಳ ವಿಸ್ತರಣೆ ಮಾಡಲಾಗುತ್ತಿದೆ. ಇದು ಎದುರಿಸಲಾಗದ ರೋಗವಲ್ಲ. ಸಾಮಾಜಿಕ ಅಂತರವನ್ನು ಎಲ್ಲರೂ ಕಾಯ್ದುಕೊಳ್ಳಬೇಕು.

ಎಲ್ಲರೂ ಧೈರ್ಯದಿಂದ ಇರಬೇಕು. ಅಮೆರಿಕದಲ್ಲಿ ಕಾರ್ಯನಿರ್ವಹಣೆ ಮಾಡುತ್ತಿರುವ ವೈದ್ಯರಾದ ಎಂ.ಎಸ್.ರೆಡ್ಡಿ ಹೇಳುವ ಪ್ರಕಾರ, ಇಂಥ ಅನೇಕ ವೈರಸ್‌ಗಳು ಬಂದು ಹೋಗಿವೆ. ಮಾಸ್ಕ್​ಗಳನ್ನು ಹಾಕುವುದರ ಜೊತೆಗೆ ನಮ್ಮ ಆಹಾರ ಪದ್ಧತಿಯಲ್ಲಿ ಬಳಸಿಕೊಳ್ಳಬೇಕು ಎಂದು ಹೇಳಿದರು.

ನಾವು ಭಾರತೀಯರು ನಮ್ಮ ಆಹಾರ ಪದ್ಧತಿಯನ್ನು ಕಟ್ಟುನಿಟ್ಟಾಗಿ ಪಾಲಿಸಬೇಕು. ದಿನ ನಿತ್ಯ ಮಜ್ಜಿಗೆ ಸೇವನೆ, ಉತ್ತಮ ಆಹಾರವನ್ನು ಸೇವಿಸಬೇಕು. ನಾವು ಮನೋಸ್ಥೈರ್ಯದಿಂದ್ದರೆ ಮಾತ್ರ ಕೊರೊನಾವನ್ನು ಎಲ್ಲರೂ ಜಯಿಸಬಹುದು. ಹಾವು ಕಚ್ಚಿದವರೂ ಬದುಕುತ್ತಾರೆ. ಆದರೆ, ಭಯ ಅವರನ್ನು ಕೊಲ್ಲುತ್ತದೆ ಎಂದು ಸ್ವಾಮೀಜಿ ಹೇಳಿದರು.

ಬಳಿಕ ಸಚಿವರಾದ ಎಸ್.ಟಿ. ಸೋಮಶೇಖರ್ ಅವರು ಮಾತನಾಡಿ, ಈ ಕೊರೊನಾ ಬಹಳ ಸಂಕಷ್ಟವನ್ನು ತಂದೊಡ್ಡಿದೆ. ಜನರು, ಆಪ್ತರನ್ನು ನಾವು ಕಳೆದುಕೊಳ್ಳುತ್ತಿದ್ದೇವೆ.

ನಾನು ಶಾಸಕನಾಗಿ ಆಯ್ಕೆಯಾಗಲು ಹಗಲಿರುಳು ಶ್ರಮಿಸಿದ ಆಪ್ತರು ಸಹ ಇಂದು ಬಲಿಯಾಗುತ್ತಿರುವುದು ನನಗೆ ಆತಂಕ ಹಾಗೂ ನೋವನ್ನು ತಂದೊಡ್ಡಿದೆ. ಹೀಗಾಗಿ, ಎಲ್ಲರನ್ನೂ ಕಾಪಾಡಿಕೊಳ್ಳಬೇಕು, ಧೈರ್ಯ ತುಂಬಬೇಕು ಎಂಬ ನಿಟ್ಟಿನಲ್ಲಿ ಕ್ಷೇತ್ರದಲ್ಲಿ ಅನೇಕ ಕಾರ್ಯಕ್ರಮಗಳನ್ನು ನಡೆಸುತ್ತಿದ್ದೇನೆ ಎಂದು ತಿಳಿಸಿದರು.

ಟ್ರಯಾಜ್ ಸೆಂಟರ್​ನಲ್ಲಿ ಸೂಕ್ತ ಮಾರ್ಗದರ್ಶನ :ಇಂದು ಕ್ಷೇತ್ರದಲ್ಲಿ ಹೇರೋಹಳ್ಳಿ, ರಾಜರಾಜೇಶ್ವರಿ ನಗರ ಹಾಗೂ ಕೆಂಗೇರಿ ಸೇರಿ ಮೂರು ಟ್ರಯಾಜ್ ಸೆಂಟರ್ ತೆರೆದಿದ್ದು, ಜನಸೇವಾ ಕೇಂದ್ರದಲ್ಲಿ ಕೋವಿಡ್ ಕೇರ್ ಸೆಂಟರ್ ತೆರೆದಿದ್ದೇವೆ. ಇಲ್ಲಿ ವೈದ್ಯರು ಸೋಂಕಿತರಿಗೆ ಸೂಕ್ತ ಮಾರ್ಗದರ್ಶನ ನೀಡುವುದಲ್ಲದೆ, ಧೈರ್ಯ ತುಂಬುವ ಕೆಲಸ ಮಾಡುತ್ತಾರೆ.

ಆಕ್ಸಿಜನ್ ಕಾನ್ಸಂಟ್ರೇಟರ್ ಸೇರಿ ಎಲ್ಲ ವ್ಯವಸ್ಥೆಗಳು ಇಲ್ಲಿವೆ. ಇನ್ನೂ ನಾಲ್ಕು ಕಡೆ ಕೋವಿಡ್ ಕೇರ್ ಸೆಂಟರ್ ತೆರೆಯಲಿದ್ದೇವೆ. ಪಾಸಿಟಿವ್ ಬಂದ ತಕ್ಷಣ ಈ ಟ್ರಯಾಜ್ ಸೆಂಟರ್​ಗಳಿಗೆ ಜನ ಹೋದರೆ ಸೂಕ್ತ ಮಾರ್ಗದರ್ಶನ ಸಿಗಲಿದೆ ಎಂದು ಸಚಿವ ಸೋಮಶೇಖರ್ ತಿಳಿಸಿದರು.

ಕ್ಷೇತ್ರದಲ್ಲಿ ಗುಣಮುಖರ ಸಂಖ್ಯೆ ಹೆಚ್ಚಳ: ಕ್ಷೇತ್ರದಲ್ಲಿ ಏಳೂವರೆ ಸಾವಿರ ಪಾಸಿಟಿವ್ ಬಂದಿದೆ. ಅದರಲ್ಲೀಗ ಆರೂವರೆ ಸಾವಿರದಷ್ಟು ಮಂದಿ ಗುಣಮುಖರಾಗಿದ್ದಾರೆ. ಯಾರೂ ಹೆದರಬೇಕಾದ ಅಗತ್ಯವಿಲ್ಲ. ಬಿಜಿಎಸ್ ಆಸ್ಪತ್ರೆಯಲ್ಲಿ ಸಹ ಸಾರ್ವಜನಿಕ ಬಳಕೆಗೆ 200 ಬೆಡ್​ಗಳನ್ನು ನೀಡಿದ್ದು, ಮುಖ್ಯಮಂತ್ರಿಗಳು ಮೂರ್ನಾಲ್ಕು ದಿನಗಳ ಹಿಂದೆ ಅದಕ್ಕೆ ಚಾಲನೆ ನೀಡಿದ್ದಾರೆ. ಖಾಸಗಿ ಆಸ್ಪತ್ರೆಗಳಿಂದ ಶೇ. 50 ಬೆಡ್​ಗಳನ್ನು ಪಡೆಯಲಾಗಿದೆ ಎಂದು ಸಚಿವ ಸೋಮಶೇಖರ್ ಹೇಳಿದರು.

1300 ವಾರಿಯರ್ಸ್​ಗೆ ಸೌಲಭ್ಯ:ಕ್ಷೇತ್ರದಲ್ಲಿ ಜನರಿಗೆ ಸೇವೆ ಸಲ್ಲಿಸಲೆಂದೇ 1300 ವಾರಿಯರ್ಸ್​ಗಳನ್ನು ನೇಮಿಸಿದ್ದು, ಅವರಿಗೆ ಹೆಲ್ತ್ ಕಿಟ್, ಮಾಸ್ಕ್, ದಿನಸಿ ಸೇರಿದಂತೆ ಅಗತ್ಯ ವಸ್ತುಗಳನ್ನು ಮನೆಗೆ ಒದಗಿಸುತ್ತಿದ್ದೇವೆ. ಇನ್ನೆರಡು ದಿನದಲ್ಲಿ ವ್ಯಾಕ್ಸಿನೇಶನ್ ಸರಿ ಹೊಂದಲಿದೆ.

ಬೇರೆ ಬೇರೆ ಕಡೆಗಳಿಂದ ಆನ್ ಲೈನ್ ಮೂಲಕ ನೋಂದಣಿ ಮಾಡಿಸಿಕೊಂಡು ಬರುತ್ತಿರುವುದು ಸಮಸ್ಯೆಯಾಗುತ್ತಿದೆ. ಹೀಗಾಗಿ ಆಯಾ ಕ್ಷೇತ್ರದಲ್ಲಿ ಕ್ಷೇತ್ರದವರಿಗೆ ಆದ್ಯತೆ ನೀಡುವ ಕೆಲಸ ಆಗಬೇಕು ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಹಾಗೂ ಉಪ ಮುಖ್ಯಮಂತ್ರಿ ಅಶ್ವತ್ಥ ನಾರಾಯಣ ಜೊತೆಗೆ ಮಾತುಕತೆ ನಡೆಸಿದ್ದೇನೆ ಎಂದರು.

ಪ್ರತಿಪಕ್ಷದವರಿಗೆ ತಿರುಗೇಟು: ತಜ್ಞರು ಹೇಳಿರುವ ಪ್ರಕಾರ ನಡೆದುಕೊಳ್ಳಬೇಕು. ಲಾಕ್​ಡೌನ್ ಅನ್ನು ಇನ್ನೂ ಎಂಟು ದಿನಗಳ ಕಾಲ ವಿಸ್ತರಣೆ ಮಾಡಬೇಕು ಅನ್ನೋದು ನನ್ನ ವೈಯಕ್ತಿಕ ಅಭಿಪ್ರಾಯ. ಕೊರೊನಾ ಸ್ವಲ್ಪ ಪ್ರಮಾಣದಲ್ಲಿ ಕಡಿಮೆಯಾಗುತ್ತಿದೆ. ಕಾಂಗ್ರೆಸ್ ಮೊದಲಿನಿಂದಲೂ ಲಸಿಕೆ ಬಗ್ಗೆ ಅಪಪ್ರಚಾರ ಮಾಡುತ್ತಾ ಬಂದಿದೆ. ಅವರಿಗೆ ವಿರೋಧ ಮಾಡಲು ಏನಾದರೂ ವಿಷಯ ಬೇಕು. ಹೀಗಾಗಿ, ಈಗ ಲಸಿಕೆ ಬಗ್ಗೆ ಮಾತನಾಡುತ್ತಾ, ಕೊರತೆ ಆಗಿರೋ ಬಗ್ಗೆ ಇಲ್ಲಸಲ್ಲದ ಅಪಪ್ರಚಾರ ಮಾಡುತ್ತಿದ್ದಾರೆ ಎಂದು ತಿರುಗೇಟು ನೀಡಿದರು.

ಬದುಕು ಕಟ್ಟಿಕೊಳ್ಳಲು ನೆರವಾಗಬೇಕು :ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ. ರವಿ ಮಾತನಾಡಿ, ವಿಜ್ಞಾನ ಎಷ್ಟೇ ಮುಂದುವರೆದಿದ್ದರೂ ವೈರಸ್​ಗಿಂತಲೂ ಮುಂದೆ ಸಾಗಲು ಆಗಲಿಲ್ಲ. ಅಮೆರಿಕದಂತಹ ಮುಂದುವರೆದ ದೇಶಗಳೇ ಇದರಿಂದ ತಪ್ಪಿಸಿಕೊಳ್ಳಲು ಆಗಲಿಲ್ಲ.

ದೇಶ-ವಿದೇಶಗಳಿಂದ ಸಹಾಯ ಕೋರಿದರೂ, ವೈದ್ಯರು ಹಗಲಿರುಳು ಶ್ರಮಿಸಿದರೂ ಎಲ್ಲರನ್ನೂ ಉಳಿಸಿಕೊಳ್ಳಲು ಆಗಲಿಲ್ಲ. ಉಳಿದವರ ನೆರವಿಗಾದರೂ ನಾವು ಧಾವಿಸಬೇಕಿದೆ. ಇಂದು 9 ಸಾವಿರ ಮೆಟ್ರಿಕ್ ಟನ್​ನಷ್ಟು ಆಕ್ಸಿಜನ್ ಪೂರೈಕೆ ಮಾಡಿದರೂ ಸಹ ಬೇಡಿಕೆ ಮುಟ್ಟಲು ಕಷ್ಟವಾಗುತ್ತಿದೆ.

ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು ವಿದೇಶಗಳಿಂದಲೂ ಸಹಕಾರ ಪಡೆದು ಆಕ್ಸಿಜನ್ ಸಹಿತ, ಔಷಧಗಳನ್ನು ಆಮದು ಮಾಡಿಸಿಕೊಳ್ಳುತ್ತಿದ್ದಾರೆ. ವೈದ್ಯರೂ ಸಹ ಹಗಲಿರುಳು ಶ್ರಮಿಸುತ್ತಿದ್ದಾರೆ. ಹೀಗಾಗಿ, ಇದರ ವಿರುದ್ಧ ಸಂಘಟಿತರಾಗಿ ಹೋರಾಡೋಣ ಎಂದು ತಿಳಿಸಿದರು.

ABOUT THE AUTHOR

...view details