ಕೋಲ್ಕತ್ತಾ: ಆರ್ಸಿಬಿ ತಂಡದ ನಾಯಕನಾಗಿ ವಿರಾಟ್ ಕೊಹ್ಲಿ ನಿನ್ನೆ ಕೆಕೆಆರ್ ವಿರುದ್ಧದ ಪಂದ್ಯದಲ್ಲಿ ತನ್ನ ವಿರಾಟ ರೂಪ ತೋರಿ ಭರ್ಜರಿ ಶತಕಗಳಿಸಿ ತಂಡಕ್ಕೆ ಜಯ ತಂದಿದ್ದರು.
ಈ ಪಂದ್ಯದಲ್ಲಿ 58 ಎಸೆತಗಳಲ್ಲಿ 9 ಫೋರ್ ಹಾಗೂ 4 ಸಿಕ್ಸರ್ ಸಹಿತ 100 ರನ್ಗಳಿಸಿದರು. ಈ ಶತಕದ ನೆರವಿನಿಂದ ಆರ್ಸಿಬಿ 213 ರನ್ಗಳಿಸಿತ್ತು. ಕೆಕೆಆರ್ 20 ಓವರ್ಗಳಲ್ಲಿ 203 ರನ್ಗಳಿಸಿ 10 ರನ್ಗಳ ಸೋಲನುಭವಿಸಿತು.
2016 ರಲ್ಲಿ ಕೊಹ್ಲಿ ನಾಯಕನಾಗಿ 4 ಶತಕಗಳಿಸಿದ್ದರು. ಇದೀಗ ಅವರ ಖಾತೆಗೆ ಮತ್ತೊಂದು ಶತಕ ಸೇರಿದೆ, ನಾಯಕನಾಗಿ 5 ಶತಕಗಳಿಸಿದರೆ, ಇತರೆ ತಂಡಗಳ ನಾಯಕರಾದ ಡೇವಿಡ್ ವಾರ್ನರ್, ಸಚಿನ್ ತೆಂಡೂಲ್ಕರ್,ವಿರೇಂದ್ರ ಸೆಹ್ವಾಗ್ ಹಾಗೂ ಆ್ಯಡಂ ಗಿಲ್ಕ್ರಿಸ್ಟ್ ತಲಾ ಒಂದು ಶತಕ ಗಳಿಸಿದ್ದಾರೆ.
ಇನ್ನು ವಿಶ್ವದ ಟಿ20 ಕ್ರಿಕೆಟ್ನಲ್ಲಿ ನೋಡುವುದಾದರೆ ಕೊಹ್ಲಿ ಹೆಚ್ಚು ಶತಕಸಿಡಿಸಿದ ನಾಯಕರ ಪಟ್ಟಿಯಲ್ಲಿ 2ನೇ ಸ್ಥಾನದಲ್ಲಿ ನಿಲ್ಲುತ್ತಾರೆ. ಆಸ್ಟ್ರೇಲಿಯಾದ ಮೈಕಲ್ ಕ್ಲಿಂಗರ್ 6 ಶತಕ ಸಿಡಿಸಿದ್ದಾರೆ. ಕೊಹ್ಲಿ 2ನೇ ಸ್ಥಾನದಲ್ಲಿದ್ದರೆ, ಗೇಲ್ 3 ಹಾಗೂ ಡೇವಿಡ್ ವಾರ್ನರ್ 3 ಶತಕಗಳೊಡನೆ 3ನೇ ಸ್ಥಾನದಲ್ಲಿದ್ದಾರೆ.
12 ಆವೃತ್ತಿಗಳಲ್ಲಿ ಹೆಚ್ಚು ಶತಕ ಸಿಡಿಸಿದ 2ನೇ ಬ್ಯಾಟ್ಸ್ಮನ್ ಎಂಬ ಕೀರ್ತಿಗೂ ಕೊಹ್ಲಿ ಪಾತ್ರರಾಗಿದ್ದಾರೆ. ವಿಂಡೀಸ್ ದೈತ್ಯ ಕ್ರಿಸ್ ಗೇಲ್ 6 ಶತಕ ಸಿಡಿಸಿದ್ದಾರೆ. ಇದರಲ್ಲಿ ಆರ್ಸಿಬಿ ಪರ 5 ಹಾಗೂ ಪಂಜಾಬ್ ಪರ ಒಂದು ಶತಕ ಸೇರಿದೆ.