ಮುಂಬೈ: ವಿಶ್ವದಾದ್ಯಂತ ಕ್ರಿಕೆಟ್ ಅಭಿಮಾನಿಗಳನ್ನು ಹೊಂದಿರುವ ದ.ಆಫ್ರಿಕಾದ ಎಬಿಡಿ ವಿಲಿಯರ್ಸ್ ಕ್ರೀಸ್ನಲ್ಲಿದ್ದರೆ ಟೆಸ್ಟ್, ಏಕದಿನ ಅಥವಾ ಟಿ20 ಯಾವ ಆಟ ಎಂಬುದು ತಿಳಿಯದ ರೀತಿಯಲ್ಲಿ ಬ್ಯಾಟಿಂಗ್ ನಡೆಸುತ್ತಿದ್ದರು. ಅವರ ಸಾಲಿಗೆ ಇದೀಗ ಆಂಗ್ಲರ ನಾಡಿನ ಕ್ರಿಕೆಟಿಗನೊಬ್ಬ ಸೇರಿಕೊಂಡಿದ್ದಾನೆ.
ಭಾರತ ಸೇರಿದಂತೆ ಹಲವು ದೇಶಗಳಲ್ಲಿ ಅಭಿಮಾನಿಗಳು ಎಬಿಡಿಯನ್ನು ತಮ್ಮ ತವರು ತಂಡದ ಆಟಗಾರರನ್ನು ಪ್ರೀತಿಸುವುದಕ್ಕಿಂದ ಹೆಚ್ಚು ಪ್ರೀತಿಸುತ್ತಾರೆ. ಮೈದಾನದಲ್ಲಿ ಜಿಂಕೆಯಂತೆ ಒಡಾಡಿ ಕ್ಷೇತ್ರರಕ್ಷಣೆ ಮಾಡುವ ಅವರು ಬ್ಯಾಟಿಂಗ್ ನಿಂತರೆ ಯಾವುದೇ ಮಾದರಿ ಕ್ರಿಕೆಟ್ ಆದರೂ ಬೌಂಡರಿ ಸಿಕ್ಸರ್ಗೆ ಕೊರತೆಯಿಲ್ಲದ ರೀತಿಯಲ್ಲಿ 360 ಕೋನದಲ್ಲಿ ರನ್ ಸೂರೆ ಮೂಡುತ್ತಾರೆ.
ಆದರೆ ಇಂದು ಎಬಿಡಿ ಆಟ ಕೇವಲ ಟಿ20 ಲೀಗ್ಗಳಿಗೆ ಸೀಮಿತವಾಗಿದೆ. ಅಂತಾರಾಷ್ಟ್ರೀಯ ಕ್ರಿಕೆಟ್ಗೆ ನಿವೃತ್ತಿ ಘೋಷಣೆ ಮಾಡಿರುವುದರಿಂದ ಅವರ ಆಟ ವಿಶ್ವಕಪ್ನಲ್ಲಿ ಕಾಣಸಿಗುತ್ತಿಲ್ಲ. ಆದರೆ ಅವರ ಜಾಗದಲ್ಲಿ ನಿಂತಿರುವ ಇಂಗ್ಲೆಂಡ್ನ ಜೋಸ್ ಬಟ್ಲರ್ ಎಬಿಡಿ ಮಾದರಿಯ ಆಟವನ್ನು ತೋರುವ ಮೂಲಕ ಅಭಿಮಾನಿಗಳಿಗೆ ಹತ್ತಿರವಾಗುತ್ತಿದ್ದಾರೆ.
ಇಂದು ಸೌತಂಪ್ಟನ್ನಲ್ಲಿ ನಡೆಯುತ್ತಿರುವ ಆಸ್ಟ್ರೇಲಿಯಾ ವಿರುದ್ಧದ ಅಭ್ಯಾಸ ಪಂದ್ಯದಲ್ಲಿ ಕೇವಲ 31 ಎಸೆತಗಳಲ್ಲಿ 52 ರನ್ ಚಚ್ಚಿದರು. ಆವರ ಈ ಸ್ಫೋಟಕ ಇನಿಂಗ್ಸ್ನಲ್ಲಿ 5 ಬೌಂಡರಿ ,3 ಸಿಕ್ಸರ್ ಸೇರಿತ್ತು.
ಕಳೆದ 2-3 ವರ್ಷಗಳಿಂದ ಇಂಗ್ಲೆಂಡ್ನ ರನ್ಮಷಿನ್ ಆಗಿರುವ ಬಟ್ಲರ್ ಯಾವುದೇ ಕ್ರಮಾಂಕದ ಬ್ಯಾಟಿಂಗ್ ಆದರೂ , ಯಾವುದೇ ಸನ್ನಿವೇಶಕ್ಕಾದರೂ ಒಗ್ಗಿಕೊಳ್ಳುವುದನ್ನು ರೂಢಿಸಿಕೊಂಡಿದ್ದು ರನ್ಗಳ ಶಿಖರ ಕಟ್ಟುತ್ತಿದ್ದಾರೆ.
130 ಏಕದಿನ ಪಂದ್ಯವನ್ನಾಡಿರುವ ಬಟ್ಲರ್ 108 ಇನಿಂಗ್ಸ್ನಲ್ಲಿ ಬ್ಯಾಟಿಂಗ್ ನಡೆಸಿದ್ದು 2953 ರನ್ ಗಳಿಸಿದ್ದಾರೆ. ಇವರ ಸ್ಟ್ರೈಕ್ ರೇಟ್ 119 ಇದೆ. 8 ಶತಕಗಳಿಸಿದ್ದು ಇದರಲ್ಲಿ ಎಲ್ಲಾ ಶತಕಗಳಲ್ಲೂ 100 ಕ್ಕಿಂತ ಹೆಚ್ಚು ಸ್ಟ್ರೈಕ್ರೇಟ್ ಕಾಪಾಡಿಕೊಂಡಿದ್ದಾರೆ.
ಇವರ ಈ ಪ್ರದರ್ಶನ ವಿಶ್ವಕಪ್ನಲ್ಲಿ ಮುಂದುವರಿದರೆ ಎಬಿಡಿ ಆಟವನ್ನು ಮಿಸ್ ಮಾಡಿಕೊಳ್ಳುವ ಅಭಿಮಾನಿಗಳಿಗೆ ನಿಜಕ್ಕೂ ಸಂತೋಷವಾಗಲಿದೆ. ತವರಿನಲ್ಲಿ ವಿಶ್ವಕಪ್ ನಡೆಯುವುದರಿಂದ ಬಟ್ಲರ್ ನಿಜಕ್ಕೂ ಅಬ್ಬರಿಸಲಿದ್ದಾರೆ ಎಂಬುದು ಇಂದು ನಡೆದ ಅಭ್ಯಾಸ ಪಂದ್ಯದಲ್ಲಿ ಸಾಬೀತಾಗಿದೆ. ಪಾಕಿಸ್ತಾನದ ವಿರುದ್ಧ ಕಳೆದ ವಾರ ಮುಕ್ತಾಯಗೊಂಡ ಏಕದಿನ ಸರಣಿಯಲ್ಲಿ ಬಟ್ಲರ್ ಕೇವಲ 50 ಎಸೆತಗಳಲ್ಲಿ ಶತಕ ಸಿಡಿಸಿದ್ದರು.