ಮೈಸೂರು:ತಾನು ಪ್ರೊಬೆಷನರಿ ಐಪಿಎಸ್ ಆಫೀಸರ್ ಎಂದು ಪರಿಚಯ ಮಾಡಿಕೊಂಡು ಇಲ್ಲಿವರೆಗೆ ಜನರನ್ನು ಯಾಮಾರಿಸಿದ್ದವನ ಅಸಲಿ ಬಣ್ಣ ಕೊನೆಗೂ ಬಯಲಾಗಿದೆ.
ಮೈಸೂರು ನಗರ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಸನ್ಮಾನ ಮಾಡಿಸಿಕೊಂಡು, ಪೊಲೀಸರಿಗೆ ಯಾಮಾರಿಸಲು ಹೋಗಿ ಈಗ ನಕಲಿ ಐಪಿಎಸ್ ಅಧಿಕಾರಿ ಈಗ ಪೊಲೀಸರ ಬಲೆಗೆ ಬಿದ್ದಿದ್ದಾನೆ.
ಚಿತ್ರದುರ್ಗ ಜಿಲ್ಲೆಯ ಮೂಲದವನಾದ ಈತ, ಮೈಸೂರಿನ ವಿಜಯನಗರ 3 ನೇ ಹಂತದ ನಿವಾಸಿ ಎಂದು ತಿಳಿದುಬಂದಿದೆ. ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ನಿವೃತ್ತ ಉಪನಿರ್ದೇಶಕ ದಿ.ನಿಜಲಿಂಗಪ್ಪ ಅವರ ಪುತ್ರ ಸಿ.ಎನ್. ದಿಲೀಪ್ ಸೆರೆ ಸಿಕ್ಕಿರುವ ನಕಲಿ ಐಪಿಎಸ್ ಅಧಿಕಾರಿ. ಈತನನ್ನು ಖೆಡ್ಡಾಕ್ಕೆ ಕೆಡವಿರುವ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.
ಕೆಲ ದಿನಗಳ ಹಿಂದ ಕೆ.ಆರ್. ಠಾಣೆಯ ಇನ್ಸ್‌ಪೆಕ್ಟರ್ ನಾರಾಯಣಸ್ವಾಮಿ ಅವರಿಗೆ ಕರೆ ಮಾಡಿದ್ದ ದಿಲೀಪ್, ನಾನು ಪ್ರವಾಸಕ್ಕೆ ಮೈಸೂರಿಗೆ ಬಂದಿದ್ದೀನಿ. ಎಲ್ಲ ವ್ಯವಸ್ಥೆ ಮಾಡಬೇಕು ಎಂದು ತಾಕೀತು ಮಾಡಿದ್ದನಂತೆ. ಇದಕ್ಕೆ ಇನ್ಸ್‌ಪೆಕ್ಟರ್ ಕೂಡ ಸುಮ್ಮನಾಗಿದ್ದರು. ಮತ್ತೆ ಎರಡು ದಿನಗಳ ನಂತರ ಕರೆ ಮಾಡಿದ್ದ ವಾಹನದ ವ್ಯವಸ್ಥೆಯಾಯಿತೇ ಎಂದು ಇನ್ಸ್‌ಪೆಕ್ಟರ್ ಅವರಿಗೆ ಕರೆ ಮಾಡಿ ವಿಚಾರಿಸಿದ್ದ. ಅಲ್ಲದೆ ವಾಹನವನ್ನು ಕಳುಹಿಸುವಂತೆ ಸೂಚನೆ ನೀಡಿದ್ದ. ತಕ್ಷಣ ಕಾರ್ಯ ಪ್ರವೃತ್ತರಾದ ಇನ್ಸ್‌ಪೆಕ್ಟರ್ ನಾರಾಯಣ ಸ್ವಾಮಿ, ಇನೋವಾ ಕಾರನ್ನು ಕಳುಹಿಸಿ ಠಾಣೆಗೆ ದಿಲೀಪ್ನನ್ನು ಕರೆಸಿಕೊಂಡಿದ್ದರು.
ಪೊಲೀಸರು ಐಪಿಎಸ್ ಅಧಿಕಾರಿಯೇ ಎಂಬುದರ ಬಗ್ಗೆ ಅನುಮಾನದ ಮಾತುಗಳನ್ನು ಆಡುತ್ತಿದ್ದಂತೆ ಕೋಪಗೊಂಡು, ನೇಮಕಾತಿ ಪತ್ರದ ಆದೇಶದ ಪ್ರತಿಯನ್ನು ನೀಡಿ ಸಮರ್ಥಿಸಿಕೊಳ್ಳಲು ಯತ್ನಿಸಿದ್ದನಂತೆ. ಅಷ್ಟೆ ಅಲ್ಲದೇ ಪೊಲೀಸರಿಗೆ ಅವಾಜ್ ಹಾಕಿದ್ದ. ಅಷ್ಟರಲ್ಲಿ ಸಹಾಯಕ ಇನ್ಸ್‌ಪೆಕ್ಟರ್ ಸುನೀಲ್, ಲೋಕ ಸೇವಾ ಆಯೋಗದ ವೆಬ್‌ಸೈಟ್ ಸೇರಿದಂತೆ ತರಬೇತಿ ಪಡೆದ ಕೇಂದ್ರಕ್ಕೆ ಕರೆ ಮಾಡಿ ಸಂಬಂಧ ಪಟ್ಟ ಅಧಿಕಾರಿಗಳನ್ನು ವಿಚಾರಿಸಿದ್ದರು. ದಿಲೀಪ್ ಹೆಸರಿನ ಐಪಿಎಸ್ ಅಧಿಕಾರಿ ಯಾರೂ ಇಲ್ಲ ಎಂಬ ಮಾಹಿತಿ ಪತ್ತೆಯಾಗಿತ್ತು.
ಈ ಎಲ್ಲಾ ಮಾಹಿತಿ ಪಡೆದ ಇನ್ಸ್‌ಪೆಕ್ಟರ್ ನಾರಾಯಣ ಸ್ವಾಮಿ ತನಿಖೆ ಶುರು ಮಾಡುತ್ತಿದ್ದಂತೆ ದಿಲೀಪ್ ತನ್ನ ನಕಲಿ ಕತೆಯನ್ನು ಬಾಯ್ಬಿಟ್ಟಿದ್ದಾನೆ. ಕೆ.ಆರ್. ಠಾಣೆಯಲ್ಲಿ ಐಪಿಸಿ ಕಲಂ 170, 463, 468, 471, 419 ಮತ್ತು 420 ಅನ್ವಯ ಪ್ರಕರಣ ದಾಖಲಾಗಿದೆ.