ನಿತ್ಯ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು: ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ರಾಜ್ಯ ಕಾಂಗ್ರೆಸ್ ಮನವಿ
ಸರ್ಕಾರ ಪರಿಹಾರ ನೀಡುವುದು ಬೇರೆ ವಿಚಾರ. ಲಸಿಕೆ ಕೊಟ್ಟು ಜನರ ಜೀವ ಉಳಿಸಿ ಅಂತಾ ನಾವು ರಾಷ್ಟ್ರಪತಿಗಳ ಮೂಲಕ ಕೇಂದ್ರ ಸರ್ಕಾರವನ್ನು ಆಗ್ರಹಿಸುತ್ತಿದ್ದೇವೆ ಎಂದು ಡಿಕೆಶಿ ತಿಳಿಸಿದ್ದಾರೆ.
ಬೆಂಗಳೂರು: ಬಿಜೆಪಿ ಸರ್ಕಾರದ ಲಸಿಕಾ ನೀತಿ ಜನವಿರೋಧಿಯಾಗಿದ್ದು, ನಿತ್ಯ ಕನಿಷ್ಠ 1 ಕೋಟಿ ಜನರಿಗೆ ಉಚಿತ ಲಸಿಕೆ ನೀಡಬೇಕು. ಆಗ ಮಾತ್ರ 3 ತಿಂಗಳ ಅವಧಿಯಲ್ಲಿ ದೇಶದ ಜನರಿಗೆ ಪೂರ್ಣ ಪ್ರಮಾಣದಲ್ಲಿ ಲಸಿಕೆ ನೀಡಲು ಸಾಧ್ಯ. ಇಲ್ಲದಿದ್ದರೆ ಮೂರು ವರ್ಷವಾದರೂ ಲಸಿಕೆ ನೀಡಲು ಆಗುವುದಿಲ್ಲ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಆಗ್ರಹಿಸಿದ್ದಾರೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ನೇತೃತ್ವದ ನಿಯೋಗ ರಾಜಭವನಕ್ಕೆ ಭೇಟಿ ನೀಡಿ ರಾಜ್ಯಪಾಲರ ಮೂಲಕ ರಾಷ್ಟ್ರಪತಿಗಳಿಗೆ ಮನವಿ ಸಲ್ಲಿಸಿತು. ರಾಜ್ಯಪಾಲರ ಭೇಟಿ ಬಳಿಕ ಕೆಪಿಸಿಸಿ ಕಚೇರಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಅವರು, ರಾಜ್ಯಪಾಲರನ್ನು ಇಂದು ಭೇಟಿ ಮಾಡಿ, ಅವರ ಮೂಲಕ ರಾಷ್ಟ್ರಪತಿಗಳಿಗೆ ನಮ್ಮ ಮನವಿ ಸಲ್ಲಿಸಿದ್ದೇವೆ. ನಿತ್ಯ 1 ಕೋಟಿ ಲಸಿಕೆಯನ್ನು ಉಚಿತವಾಗಿ ನೀಡಬೇಕು ಎಂಬುದು ನಮ್ಮ ಮನವಿ. ಈ ಜವಾಬ್ದಾರಿಯನ್ನು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ತೆಗೆದುಕೊಳ್ಳಬೇಕು. ಸರ್ಕಾರದ ಪ್ರಸ್ತುತ ಲಸಿಕಾ ನೀತಿ ಜನವಿರೋಧಿಯಾಗಿದ್ದು, ಸದ್ಯ ದಿನಕ್ಕೆ ಕೇವಲ 16 ಲಕ್ಷ ಜನರಿಗೆ ಮಾತ್ರ ನೀಡಲು ಸಾಧ್ಯವಾಗುತ್ತಿದೆ. ದಿನಕ್ಕೆ 1 ಕೋಟಿಯಂತೆ ನೀಡಿದರೆ ಮಾತ್ರ ದೇಶದ ಎಲ್ಲರಿಗೂ ಅಗತ್ಯ ಅವಧಿಯಲ್ಲಿ ಲಸಿಕೆ ನೀಡಲು ಸಾಧ್ಯ. ಇಲ್ಲವಾದರೆ ಮೂರು ವರ್ಷವಾದರೂ ಈ ಲಸಿಕೆ ಕಾರ್ಯಕ್ರಮ ಮುಗಿಯುವುದಿಲ್ಲ ಎಂದರು.