ರಾಯಚೂರು:ಜಿಲ್ಲೆಯು ಸುಡು ಬಿಸಿಲಿನ ಜತೆಗೆ ವಿಶೇಷ ಖಾದ್ಯಕ್ಕೂ ಫೇಮಸ್ ಆಗಿದೆ. ದೇವದುರ್ಗ ತಾಲೂಕಿನ ಎಪಿಎಂಸಿ ಕ್ರಾಸ್ ಬಳಿಯ ಹೋಟೆಲ್ ಒಗ್ಗರಣೆ ಪ್ರಿಯರನ್ನು ಕೈ ಬೀಸಿ ಕರೆಯುತ್ತಿದೆ.
ಬಿಸಿಲ ನಾಡಲ್ಲಿ ಬಿಸಿ, ಬಿಸಿಯ ರುಚಿಯಾದ ಒಗ್ಗರಣೆ ಫೇಮಸ್ 20 ವರ್ಷಗಳಿಂದ ಇದೇ ಕೈ ರುಚಿಯನ್ನು ಕಾಯ್ದುಕೊಂಡು ಬಂದಿದ್ದಾರೆ. ಒಂದು ಪ್ಲೇಟ್ ಒಗ್ಗರಣೆ ಮಂಡಕ್ಕಿ, ಎರಡು ಮಿರ್ಚಿಗೆ ₹20 ದರ ನಿಗದಿ ಮಾಡಲಾಗಿದೆ. ಕಡಿಮೆ ದರ ಇರುವುದರಿಂದ ಕಾರ್ಮಿಕರು, ದಿನಗೂಲಿ ನೌಕರರು ಹಾಗೂ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗಿರುತ್ತದೆ. ಬೆಳಿಗ್ಗೆಯಿಂದ ಸಂಜೆವರೆಗೂ ಹೋಟೆಲ್ ಸೇವೆ ಲಭ್ಯವಿದ್ದು, ಯಾವುದೇ ವೇಳೆಯಲ್ಲಿ ಹೋದರು ಬಿಸಿ ಬಿಸಿಯಾಗಿಯೇ ರುಚಿ ಸವಿಯಬಹುದು.
ಬೆಳಿಗ್ಗೆ ಹಾಗೂ ಸಂಜೆ ಸಮಯದಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಜನ ಬರುತ್ತಾರೆ. ರುಚಿ, ಶುಚಿ ಕಾಯ್ದುಕೊಂಡಿದ್ದರಿಂದ ರಾಜಕಾರಣಿಗಳು, ವಿಐಪಿಗಳು ಬಂದು ತಿನ್ನುತ್ತಾರೆ. ಮನೆಗೂ ಕಟ್ಟಿಸಿಕೊಂಡು ಹೋಗುತ್ತಾರೆ. ಇಲ್ಲಿ ಯಾವುದೇ ಕೆಲಸಗಾರರನ್ನು ಇಟ್ಟುಕೊಂಡಿಲ್ಲ. ಹಾಗಾಗಿ ಇಂತಹ ಗುಣಮಟ್ಟ ಕಾಪಾಡಿಕೊಂಡಿದ್ದೇವೆ ಎಂದು ನಗುತ್ತಲೇ ಉತ್ತರಿಸುತ್ತಾರೆ ಮಾಲೀಕ ವಿರೇಶ್.
ನಿತ್ಯ 4ರಿಂದ 5 ಚೀಲ ಮಂಡಾಳ ಖರ್ಚಾಗುತ್ತದೆ. ಯಾವುದೇ ಕಾರಣಕ್ಕೂ ಗುಣಮಟ್ಟ ಹಾಗೂ ಪ್ರಮಾಣವನ್ನು ಹೆಚ್ಚು ಕಡಿಮೆ ಮಾಡಿಲ್ಲ. ಗ್ರಾಹಕರ ವಿಶ್ವಾಸ, ಪ್ರೀತಿ ಗಳಿಸಿದ್ದಕ್ಕೆ ತುಂಬಾ ಖುಷಿಯಾಗುತ್ತಿದೆ ಎಂದರು.
ಗ್ರಾಹಕರು ಮಧ್ಯಾಹ್ನದ ಊಟದ ಬದಲಾಗಿ ಎಷ್ಟೋ ಗ್ರಾಹಕರು ಒಗ್ಗರಣೆ ಮಂಡಕ್ಕಿಯನ್ನೇ ಸೇವಿಸುತ್ತಾರೆ ಎಂದು ಹೇಳಿದರು. ನೀವೂ ಇದರ ರುಚಿ ಸವಿಯಲು ಒಮ್ಮೆ ಇಲ್ಲಿಗೆ ಭೇಟಿ ಕೊಡಿ.