ಕರ್ನಾಟಕ

karnataka

ETV Bharat / briefs

ಆಯತಪ್ಪಿದ ಎತ್ತಿನ ಬಂಡಿ: ನಾಲ್ವರ ಸಾವು, ಸಂಬಂಧಿಕರ ಗೋಳಾಟ - ರೈತ ಕುಟುಂಬ

ಉದ್ದೂರು ಹೊಸಹಳ್ಳಿ ಗ್ರಾಮದ ರೈತ ಕುಟುಂಬದ ನಾಲ್ವರು ಮೃತಪಟ್ಟಿದ್ದು, ಜೋಳ ಬಿತ್ತನೆಗೆ ಹೊಲಕ್ಕೆ ತೆರಳುತ್ತಿದ್ದಾಗ ಈ ದುರ್ಘಟನೆ ನಡೆದಿದೆ.

ಸಾವನಪ್ಪಿದ ರೈತ ಕುಟುಂಬ

By

Published : Jun 1, 2019, 8:51 PM IST

ಹಾಸನ:ಮುಂಗಾರು ಮಳೆ ಪ್ರಾರಂಭವಾಗಿದ್ದರಿಂದ ಸಾಮಾಗ್ರಿಗಳೊಂದಿಗೆ ಹೊಲಕ್ಕೆ ಜೋಳ ಬಿತ್ತನೆಗೆ ತೆರಳುತ್ತಿದ್ದಾಗ ಆಯತಪ್ಪಿದ ಎತ್ತಿನ ಬಂಡಿ ಕೆರೆಗೆ ಉರುಳಿದೆ. ಪರಿಣಾಮ ಒಂದೇ ಕುಟುಂಬದ ನಾಲ್ವರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಹಾಸನದ ಉದ್ದೂರು ಗ್ರಾಮದ ಕೆರೆಗೆ ಬಿದ್ದು ರೈತ ಕುಟುಂಬದ ನಾಲ್ವರು ಸಾವು

ಹಾಸನ ಜಿಲ್ಲೆ ಹೊಳೆನರಸೀಪುರ ತಾಲ್ಲೂಕು ಹಳ್ಳಿಮೈಸೂರು ಹೋಬಳಿಯ ಉದ್ದೂರು ಹೊಸಹಳ್ಳಿ ಗ್ರಾಮದಲ್ಲಿಈ ದುರ್ಘಟನೆ ನಡೆದಿದೆ. ಜವರಾಯನ ಅಟ್ಟಹಾಸಕ್ಕೆ ರಾಜೇಗೌಡ (50), ಶಾರದ (45) ರುಚಿತ (6) ಮತ್ತು ಧೃತಿ(5) ಸಾವಿಗೀಡಾಗಿದ್ದಾರೆ.

ಬೆಳಿಗ್ಗೆ ಸುಮಾರು 9 ಗಂಟೆಗೆ ಬಿತ್ತನೆ ಸಾಮಗ್ರಿಗಳನ್ನೆಲ್ಲಾ ಎತ್ತಿನ ಗಾಡಿಗೆ ತುಂಬಿಕೊಂಡು ಸಂಚರಿಸುತ್ತಿದ್ದಾಗ ಈ ಘಟನೆ ಸಂಭವಿಸಿದೆ.

ಮೈಸೂರಿನಿಂದ ತಾತನ ಮನೆಯಲ್ಲಿ ರಜೆ ಕಳೆಯಲು ಬಂದ ರುಚಿತಾ, ಧೃತಿ ಹಠ ಹಿಡಿದು ಹೊಲಕ್ಕೆ ಹೊರಟವರು ಬಾರದ ಲೋಕಕ್ಕೆ ತೆರಳಿದ್ದಾರೆ. ರಾಜೇಗೌಡರ ಜಮೀನಿಗೆ ಹೋಗಲು ಪ್ರತ್ಯೇಕ ದಾರಿ ಇದ್ದರೂ ಹತ್ತಿರವಾಗುತ್ತದೆ ಎಂಬ ಕಾರಣಕ್ಕೆ ಕೆರೆಯ ಮೈದಾನದ ಮಧ್ಯೆಯೇ ಎತ್ತಿನಗಾಡಿ ತೆಗೆದುಕೊಂಡು ಹೊರಟಿದ್ದಾರೆ.

ಬೇಸಿಗೆಯಲ್ಲಿ ಕೆರೆ ನೀರು ಖಾಲಿಯಾದಾಗ ಗೋಡು ತೆಗೆದಿದ್ದರಿಂದ ಆಳವಾದ ಗುಂಡಿಗಳು ಬಿದ್ದಿದ್ದವು. ಮಳೆ ಬಂದು ದೊಡ್ಡ ಗುಂಡಿಗಳು ತುಂಬಿಕೊಂಡಿದ್ದು, ರಾಜೇಗೌಡ ಗುಂಡಿಯ ಪಕ್ಕದಲ್ಲೇ ಎತ್ತಿನ ಗಾಡಿ ಚಲಾಯಿಸಿದ್ದಾರೆ.ಗಾಡಿ ಕೆರೆಗೆ ಬಿದ್ದು ಸಂಪೂರ್ಣ ಮುಳುಗಿ ನಾಲ್ವರೂ ಗಾಡಿ ಕೆಳಗೆ ಸಿಲುಕಿ ಹಾಕಿಕೊಂಡಿದ್ದಾರೆ. ಎತ್ತುಗಳು ತಮಗೆ ಹೂಡಿದ್ದ ಕುಣಿಕೆಯನ್ನು ಬಿಚ್ಚಿಕೊಂಡು ಹೊರ ಜಿಗಿದಿವೆ.

ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತ್ತು. ಘಟನಾ ಸ್ಥಳಕ್ಕೆ ಹಾಸನ ಎಸ್ಪಿ ಚೇತನ್ ಸಿಂಗ್ ರಾಥೋರ್ ಆಗಮಿಸಿ ಪರಿಶೀಲನೆ ನಡೆಸಿದ್ದು, ಹಳ್ಳಿ ಮೈಸೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ABOUT THE AUTHOR

...view details