ಲಂಡನ್: ಆರಂಭಿಕ ಬ್ಯಾಟ್ಸ್ಮನ್ ಶಿಖರ್ ಧವನ್ ಅಬ್ಬರದ ಶತಕ ಹಾಗೂ ಕೊಹ್ಲಿ-ರೋಹಿತ್ರ ಆಕರ್ಷಕ ಅರ್ಧಶತಕದ ನೆರವಿನಿಂದ ಭಾರತ ತಂಡ 353 ರನ್ಗಳ ಬೃಹತ್ ಮೊತ್ತ ಕಲೆಹಾಕಿದೆ.
ಟಾಸ್ ಗೆದ್ದು ಬ್ಯಾಟಿಂಗ್ ಆಯ್ದುಕೊಂಡ ಕೊಹ್ಲಿ ನಿರ್ಧಾರವನ್ನು ಉತ್ತಮವಾಗಿ ಉಪಯೋಗಿಸಿಕೊಂಡ ರೋಹಿತ್- ಧವನ್ ಜೋಡಿ ಮೊದಲ ವಿಕೆಟ್ಗೆ 127 ರನ್ ಸೇರಿಸಿ ಭರ್ಜರಿ ಆರಂಭ ನೀಡಿದರು. 70 ಎಸೆತಗಳಲ್ಲಿ 57 ರನ್ ಗಳಿಸಿದ್ದ ರೋಹಿತ್ ಕೌಲ್ಟರ್ ನೈಲ್ಗೆ ವಿಕೆಟ್ ಒಪ್ಪಿಸಿದರು.
ನಂತರ ನಾಯಕ ಕೊಹ್ಲಿ ಜೊತೆಗೂಡಿದ ಧವನ್ 2ನೇ ವಿಕೆಟ್ ಜೊತೆಯಾಟದಲ್ಲಿ 93 ರನ್ ಸೇರಿಸಿದರು. 109 ಎಸೆತಗಳಲ್ಲಿ 117 ರನ್ ಗಳಿಸಿದ ಧವನ್ ಸಿಕ್ಸರ್ ಎತ್ತುವ ಯತ್ನದಲ್ಲಿ ಸ್ಟಾರ್ಕ್ ಬೌಲಿಂಗ್ನಲ್ಲಿ ನಥನ್ ಲಿಯಾನ್ಗೆ ಕ್ಯಾಚ್ ನೀಡಿ ಔಟಾದರು. ಈ ವೇಳೆ ಧವನ್ 16 ಬೌಂಡರಿ ಸಿಡಿಸಿದ್ದರು.
ಧವನ್ ಔಟಾದ ನಂತರ ಕ್ರೀಸಿಗೆ ಬಂದ ಆಲ್ರೌಂಡರ್ ಪಾಂಡ್ಯ ಕೇವಲ 27 ಎಸೆತಗಳಲ್ಲಿ 4 ಬೌಂಡರಿ ಹಾಗೂ 3 ಸಿಕ್ಸರ್ ಸಹಿತ 48 ರನ್ಗಳಿಸಿ ನಾಯಕ ಕೊಹ್ಲಿ ಜೊತೆಗೆ 3ನೇ ವಿಕೆಟ್ ಜೊತೆಯಾಟದಲ್ಲಿ 80 ರನ್ ಜೊತೆಯಾಟ ನೀಡಿ ಕಮಿನ್ಸ್ಗೆ ವಿಕೆಟ್ ಒಪ್ಪಿಸಿದರು.
ಕೊನೆಯ 4.1 ಓವರ್ಗಳಿದ್ದಾಗ ಕ್ರೀಸ್ಗೆ ಬಂದ ಧೋನಿ(27) ಕೊಹ್ಲಿ ಜೊತೆ ಸೇರಿ 4ನೇ ವಿಕೆಟ್ ಜೊತೆಯಾಟದಲ್ಲಿ 37 ರನ್ ಸೇರಿಸಿ ಕೊನೆಯ ಓವರ್ನಲ್ಲಿ ಸ್ಟೋಯ್ನಿಸ್ ಹಿಡಿದ ಅದ್ಭುತ ಒಂದು ಕೈ ಕ್ಯಾಚ್ಗೆ ಬಲಿಯಾದರು. ಇವರ ಬೆನ್ನಲ್ಲೇ 77 ಎಸೆತಗಳಲ್ಲಿ 4 ಬೌಂಡರಿ 2 ಸಿಕ್ಸರ್ ಸಹಿತ 82 ರನ್ ಗಳಿಸಿದ್ದ ಕೊಹ್ಲಿ ಕೂಡ ಅದೇ ಓವರ್ನ 5ನೇ ಎಸೆತದಲ್ಲಿ ಔಟಾದರು. ಕನ್ನಡಿಗ ರಾಹುಲ್ 3 ಎಸೆತಗಳಲ್ಲಿ ತಲಾ ಒಂದು ಬೌಂಡರಿ ಹಾಗೂ 1 ಸಿಕ್ಸರ್ ಸಿಡಿಸಿ ತಂಡದ ಮೊತ್ತ 350 ರ ಗಡಿ ದಾಟುವಂತೆ ಮಾಡಿದರು.
ಆಸೀಸ್ ಪರ ಸ್ಟಾರ್ಕ್ 74 ರನ್ಗೆ 1 ವಿಕೆಟ್, ಕಮ್ಮಿನ್ಸ್ 55 ರನ್ ನೀಡಿ 1ವಿಕೆಟ್ ಹಾಗೂ ಕೌಲ್ಟರ್ ನೈಲ್ 63ಕ್ಕೆ 1 ಹಾಗೂ ಸ್ಟೊಯ್ನಿಸ್ 62 ರನ್ ನೀಡಿ 2 ವಿಕೆಟ್ ಪಡೆದರು.