ಜಗತ್ತಿನಾದ್ಯಂತ ಕೋವಿಡ್-19 ಸಾಂಕ್ರಾಮಿಕ ವೈರಸ್‌ನಿಂದಾಗಿ ಜನಜೀವನ ತತ್ತರಿಸಿದೆ. ಈ ನಡುವೆಯೇ 150 ರಿಂದ 175 ಮಿಲಿಯನ್ ಜನರು ತೀವ್ರ ಬಡತನಕ್ಕೆ ಸಿಲುಕುತ್ತಾರೆ ಎಂದು ವಿಶ್ವಸಂಸ್ಥೆ ಕಳವಳ ವ್ಯಕ್ತಪಡಿಸಿದೆ.
ಕೊರೊನಾ 17 ಕೋಟಿ ಜನರನ್ನು ಬಡತನದ ಕೂಪಕ್ಕೆ ತಳ್ಳಲಿದೆ: ವಿಶ್ವಸಂಸ್ಥೆ
ಕೊರೊನಾ ವೈರಸ್ ಹೊಡೆತಕ್ಕೆ ಸಿಲುಕಿ ಅನೇಕ ದೇಶಗಳ ಆರ್ಥಿಕ ಪರಿಸ್ಥಿತಿ ಹದಗೆಟ್ಟಿದೆ. ಅದರಲ್ಲೂ ಅಸಂಘಟಿತ ವಲಯದ ಮೇಲೆ ಆಘಾತಕಾರಿ ಪರಿಣಾಮ ಉಂಟಾಗಿದೆ. ಇದೀಗ 150 ರಿಂದ 175 ಮಿಲಿಯನ್ (15-17.5 ಕೋಟಿ) ಜನರು ತೀವ್ರ ಬಡತನಕ್ಕೆ ಸಿಲುಕುವ ಸಂಭವವಿದೆ. ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿರುತ್ತಾರೆ ಎಂದು ವಿಶ್ವಸಂಸ್ಥೆ ಹೇಳಿದೆ.
ಕೋವಿಡ್-19ನಿಂದಾಗಿ ಅನೇಕ ದೇಶದ ಅರ್ಥಿಕ ಸ್ಥಿತಿಗೆ ಭಾರೀ ಪೆಟ್ಟು ಬಿದ್ದಿದ್ದು, ಅಂದಾಜು 17 ಕೋಟಿ ಮಂದಿ ಬಡತನದ ಕೂಪದಲ್ಲಿ ಸಿಲುಕುತ್ತಾರೆ ಎಂದು ವಿಶ್ವಸಂಸ್ಥೆಯ ಮಾನವ ಹಕ್ಕುಗಳ ವಿಶೇಷ ವರದಿಗಾರ ಆಲಿವಿಯರ್ ಡಿ ಷುಟರ್ ಅವರು ಯುಎನ್ ಜನರಲ್ ಅಸೆಂಬ್ಲಿಯ ಮೂರನೇ ಸಮಿತಿ ಸಭೆಯಲ್ಲಿ ಹೇಳಿದ್ದಾರೆ.
ಬಡತನಕ್ಕೆ ಸಿಲುಕುವವರಲ್ಲಿ ಹೆಚ್ಚಿನವರು ಅಸಂಘಟಿತ ವಲಯದಲ್ಲಿ ಕೆಲಸ ಮಾಡುವವರಾಗಿದ್ದು, ಅವರಲ್ಲಿ ಹೆಚ್ಚಿನವರು ಮಹಿಳೆಯರೇ ಆಗಿರುತ್ತಾರೆ. 1929ರ ಮಹಾ ಆರ್ಥಿಕ ಬಿಕ್ಕಟ್ಟಿನಿಂದ ಹೊರಬಂದ ಹಾಗೆಯೇ ಈ ಕೋವಿಡ್ ಬಿಕ್ಕಟ್ಟಿನಿಂದ ಜಗತ್ತು ಹೊರಬರಬೇಕಿದೆ. ಅದಕ್ಕೆ ನಮ್ಮ ಅಭಿವೃದ್ಧಿಯ ಮಾದರಿಯನ್ನು ಪುನರ್ ವಿಮರ್ಶೆ ಮಾಡಬೇಕು ಎಂದು ಡಿ.ಷುಟರ್ ಸಲಹೆ ಕೊಟ್ಟಿದ್ದಾರೆ.