ಹುಬ್ಬಳ್ಳಿ:ನಾನು ನಿನ್ನೆ-ಇಂದು ಅಷ್ಟೇ ಶಿವಮೊಗ್ಗ ಪ್ರಚಾರಕ್ಕೆ ಹೋಗಿದ್ದೇನೆ. ರಾಘವೇಂದ್ರ 1 ಲಕ್ಷಕ್ಕೂ ಹೆಚ್ಚು ಅಂತರದಿಂದ ಗೆದ್ದೇ ಗೆಲ್ಲುತ್ತಾರೆ ಎಂದು ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಹುಬ್ಬಳ್ಳಿಯಲ್ಲಿ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
ಮಾಧ್ಯಮವೊಂದಕ್ಕೆ ಸಂದರ್ಶನ ನೀಡಿದ ಯಡಿಯೂರಪ್ಪ, ಸಿಎಂ ಕುಮಾರಸ್ವಾಮಿ ನಡೆಯನ್ನು ತೀವ್ರವಾಗಿ ಖಂಡಿಸಿದರು. ಐಟಿ ದಾಳಿ ವಿರುದ್ಧ ಅಧಿಕಾರದಲ್ಲಿರುವವರೇ ಪ್ರತಿಭಟನೆ ಮಾಡಿರುವುದು ನಾಚಿಕೆಗೇಡಿನ ವಿಷಯ. ಮೇಲಾಗಿ ಅವರು ಎಷ್ಟು ಹೆದರಿದ್ದಾರೆ ಎನ್ನುವುದಕ್ಕೆ ಈ ಪ್ರತಿಭಟನೆಯೇ ತೋರಿಸುತ್ತದೆ ಎಂದು ಹರಿಹಾಯ್ದರು.
ಬಿಎಸ್ವೈ ವರ್ಸಸ್ ಹೆಚ್ಡಿಕೆ ಇನ್ನು ಮಂಡ್ಯದಲ್ಲಿ ನಿಖಿಲ್ಗೆ ಪಕ್ಷೇತರ ಅಭ್ಯರ್ಥಿ ಸುಮಲತಾ ಟಫ್ ಫೈಟ್ ಕೊಟ್ಟಿದ್ದಾರೆ. ಅವರು ಗೆಲ್ಲುವ ವಿಶ್ವಾಸ ಇದೆ. ನಿಖಿಲ್ ಸೋಲುವುದು ನಿಶ್ಚಿತ ಎಂದು ಭವಿಷ್ಯ ನುಡಿದರು. ಇನ್ನು ಡೈರಿ ಬಗ್ಗೆ ಮಾತನಾಡಿದ ಅವರು, ಡಿಕೆಶಿ ಮನೆಯಲ್ಲಿ ಸಿಕ್ಕಿರುವ ಡೈರಿ ಫೋಟೋ ಕಾಪಿಗಳೇ ನಕಲಿ. ಈ ಬಗ್ಗೆ ಐಟಿ ಇಲಾಖೆ ತನಿಖೆ ನಡೆಸಿ ಅದು ತಮ್ಮ ಕೈ ಬರಹ ಅಲ್ಲ ಎಂಬುದನ್ನು ಹೇಳಿದ್ದಾರೆ. ಇದು ಮೊದಲು ಡೈರಿನೇ ಅಲ್ಲ ಆದರೆ 2-3 ಸೀಟುಗಳು ಆಗಿವೆ ಎಂದು ಬಿಎಸ್ವೈ ಸ್ಪಷ್ಟಪಡಿಸಿದ್ದಾರೆ.
ಇದೇ ವೇಳೆ ಮಾತನಾಡಿದ ಅವರು, ಲಿಂಗಾಯತ ಧರ್ಮವನ್ನು ಒಡೆಯಲು ಗೃಹ ಸಚಿವ ಎಂ.ಬಿ. ಪಾಟೀಲ್ ಹಾಗೂ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ ಸಂಚು ರೂಪಿಸಿದ್ದರು ಎಂದು ಆರೋಪಿಸಿದರು.
ಮತ್ತೊಂದೆಡೆ ಸಂದರ್ಶನ ನೀಡಿರುವ ಕುಮಾರಸ್ವಾಮಿ ಶಿವಮೊಗ್ಗದಲ್ಲಿ ಬಿ ವೈ ರಾಘವೇಂದ್ರ ಸೋಲುವುದು ನಿಶ್ಚಿತ. ಅಲ್ಲಿ ಬಿಗ್ ಶಾಕ್ ಕಾದಿದೆ ಎಂದು ಟಾಂಗ್ ಕೊಟ್ಟಿದ್ದಾರೆ. ಇನ್ನೊಂದೆಡೆ ಮೋದಿ ವಿರುದ್ಧವೂ ಹರಿಹಾಯ್ದಿದ್ದಾರೆ. ನಾವು ಬಡವರ ಮಧ್ಯದಿಂದಲೇ ಆಯ್ಕೆ ಆಗಿ ಬಂದಿದ್ದೇವೆ. ಜನರ ಸಂಕಷ್ಟಗಳು ತಮಗೂ ಗೊತ್ತಿದೆ.