ಬೆಳಗಾವಿ :ಕಳೆದ ಮಳೆಗಾಲದ ಪ್ರವಾಹದಿಂದಾಗಿ ನಗರ ಪ್ರದೇಶದಲ್ಲಿ ತೀವ್ರ ಹಾನಿಯುಂಟು ಮಾಡಿದ್ದ ಬಳ್ಳಾರಿ ನಾಲಾ ಪ್ರದೇಶವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮೇಶ್ ಜಾರಕಿಹೊಳಿ ಪರಿಶೀಲಿಸಿದರು.
ನಗರದ ಪ್ರಮುಖದ ಬಳ್ಳಾರಿ ನಾಲಾ, ಲೇಂಡಿ ನಾಲಾ ಹಾಗೂ ನಾಗಝರಿ ನಾಲಾಗಳ ಎರಡೂ ಬದಿಗೆ ಬೆಳೆದಿರುವ ಕಸವನ್ನು ತಕ್ಷಣವೇ ಸ್ವಚ್ಛಗೊಳಿಸಬೇಕು ಮತ್ತು ನಗರದಲ್ಲಿ ಅಗತ್ಯವಿರುವ ಕಡೆಗಳಲ್ಲಿ ಎರಡೂ ಬದಿಗೆ ತಡೆಗೋಡೆ ನಿರ್ಮಿಸಬೇಕು ಎಂದು ಮಹಾನಗರ ಪಾಲಿಕೆ ಆಯುಕ್ತರಿಗೆ ಸಚಿವರು ಸೂಚಿಸಿದರು. ಕಸ, ಅತಿಕ್ರಮಣ ಹಾಗೂ ಸೂಕ್ತ ತಡೆಗೋಡೆ ನಿರ್ಮಿಸದ ಕಾರಣ ಮಳೆಗಾಲದಲ್ಲಿ ಅಪಾರ ಪ್ರಮಾಣದ ಹಾನಿಯಾಗಿದೆ.
ಆದ್ದರಿಂದ ಅತಿಕ್ರಮಣ ತೆರವು ಮತ್ತು ನಾಲಾಗಳ ಸ್ವಚ್ಛತೆಗೆ ತಕ್ಷಣ ಕ್ರಮಕೈಗೊಳ್ಳಬೇಕು ಎಂದು ಬೆಳಗಾವಿ ದಕ್ಷಿಣ ಮತಕ್ಷೇತ್ರದ ಶಾಸಕ ಅಭಯ್ ಪಾಟೀಲ ಒತ್ತಾಯಿಸಿದರು. ಬಳ್ಳಾರಿ ನಾಲಾಗೆ ಈಗಿರುವ ತಾತ್ಕಾಲಿಕ ತಡೆಗೋಡೆ ಗಟ್ಟಿಯಾಗಿಲ್ಲ. ಆದ್ದರಿಂದ ಮರು ನಿರ್ಮಾಣ ಅಗತ್ಯವಿದೆ ಎಂದು ಶಾಸಕ ಪಾಟೀಲ್ ಜಿಲ್ಲಾ ಉಸ್ತುವಾರಿ ಸಚಿವರಿಗೆ ಮನವರಿಕೆ ಮಾಡಿಕೊಟ್ಟರು.
ಬೆಳಗಾವಿ ಉತ್ತರ ಮತಕ್ಷೇತ್ರದ ಶಾಸಕ ಅನಿಲ್ ಬೆನಕೆ ಅವರು, ಮಳೆಗಾಲ ಆರಂಭಗೊಂಡಿರುವುದರಿಂದ ತಕ್ಷಣವೇ ನಾಲಾ ಸ್ವಚ್ಛಗೊಳಿಸುವ ಬಗ್ಗೆ ವಿವರಿಸಿದರು. ಇದಲ್ಲದೇ ಬ್ರಿಟಿಷ್ ಕಾಲದಲ್ಲಿ ನಿರ್ಮಾಣ ಮಾಡಲಾದ ಕಿರುಸೇತುವೆಗಳನ್ನು ಸಚಿವರಿಗೆ ತೋರಿಸಿದ ಅವರು, ಇದೇ ಮಾದರಿಯಲ್ಲಿ ನಗರದ ವಿವಿಧ ಕಡೆಗಳಲ್ಲಿ ಸೇತುವೆ ನಿರ್ಮಿಸುವ ಅಗತ್ಯವಿದೆ ಎಂದು ಅಭಿಪ್ರಾಯಪಟ್ಟರು.
ಸೋಲಾರ್ ಪ್ಯಾನೆಲ್ ಅಳವಡಿಕೆಗೆ ಸಲಹೆ :ಬಳ್ಳಾರಿ ನಾಲಾ ಪರಿಶೀಲನೆ ಕೈಗೊಂಡ ರೈಲ್ವೆ ಇಲಾಖೆಯ ರಾಜ್ಯ ಸಚಿವರಾದ ಸುರೇಶ್ ಅಂಗಡಿ ಅವರು, ಗುಜರಾತ್ ರಾಜ್ಯದ ಕೆಲವು ಕಡೆಗಳಲ್ಲಿ ನಾಲಾಗಳ ಮೇಲೆ ಹಾಗೂ ಅಕ್ಕಪಕ್ಕದಲ್ಲಿ ಸೋಲಾರ್ ಪ್ಯಾನೆಲ್ ಅಳವಡಿಸಲಾಗಿದೆ. ಅದೇ ಮಾದರಿಯಲ್ಲಿ ಬಳ್ಳಾರಿ ನಾಲಾ ಇಕ್ಕೆಲಗಳಲ್ಲೂ ಸೋಲಾರ್ ಪ್ಯಾನಲ್ ಅಳವಡಿಸುವ ಬಗ್ಗೆ ಯೋಜನೆ ರೂಪಿಸುವಂತೆ ಅಧಿಕಾರಿಗಳಿಗೆ ಸಲಹೆ ನೀಡಿದರು.