ನವದೆಹಲಿ: ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ನಿವೃತ್ತಿ ಘೋಷಿಸಿರುವ ಡ್ವೇನ್ ಬ್ರಾವೋ ಹಾಗೂ ಎರಡುವರೆ ವರ್ಷಗಳಿಂದ ಏಕದಿನ ಪಂದ್ಯಗಳನ್ನೇ ಆಡದ ಕಿರನ್ ಪೊಲಾರ್ಡ್ರನ್ನು ವಿಂಡೀಸ್ ವಿಶ್ವಕಪ್ ತಂಡದ ಸ್ಟಾಂಡ್ಬೈ ಆಟಗಾರರಾಗಿ ಆಯ್ಕೆಯಾಗಿ ಅಚ್ಚರಿ ಮೂಡಿಸಿದ್ದಾರೆ.
ಡ್ವೇನ್ ಬ್ರಾವೋ 2018ರಲ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ವಿದಾಯ ಘೋಷಿಸಿದ್ದರು. 2014ರಲ್ಲಿ ಭಾರತದ ವಿರುದ್ಧ ತನ್ನ ಕೊನೆಯ ಪಂದ್ಯವಾಡಿರುವ ವೆಸ್ಟ್‌ಇಂಡೀಸ್‌ನ ಮಾಜಿ ನಾಯಕ ಬ್ರಾವೊ ಈ ವರ್ಷದ ಐಸಿಸಿ ವಿಶ್ವಕಪ್‌ಗೆ ವಿಂಡೀಸ್‌ನ ಮೀಸಲು ಆಟಗಾರರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದಾರೆ. ಮತ್ತೊಬ್ಬ ಆಟಗಾರ ಪೊಲಾರ್ಡ್ ಕೂಡ 2016 ಅಕ್ಟೋಬರ್‌ನಿಂದ ಯಾವುದೇ ಏಕದಿನ ಪಂದ್ಯವನ್ನಾಡಿಲ್ಲ.
2014ರಲ್ಲಿ ವೇತನಕ್ಕೆ ಸಂಬಂಧಿಸಿದಂತೆ ವಿಂಡೀಸ್ ಕ್ರಿಕೆಟ್ ಮಂಡಳಿ ವಿರುದ್ಧ ತಿರುಗಿಬಿದ್ದಿದ್ದ ಬ್ರಾವೋ ಸರಣಿಯನ್ನು ಅರ್ಧದಲ್ಲೇ ಮೊಟಕುಗೊಳಿಸಿ ಸ್ವದೇಶಕ್ಕೆ ಮರಳಿದ್ದರು. ಅಂದಿನಿಂದ ಬ್ರಾವೋ ಏಕದಿನ ಕ್ರಿಕೆಟ್ ಆಡೇ ಇಲ್ಲ. ಆದರೆ ಐಪಿಎಲ್, ಸಿಪಿಎಲ್, ಬಿಗ್ಬ್ಯಾಷ್ ಸೇರಿದಂತೆ ಹಲವು ಟಿ20 ಲೀಗ್ಗಳಲ್ಲಿ ಮಾತ್ರ ಇನ್ನು ಸಕ್ರಿಯರಾಗಿದ್ದಾರೆ. ಬ್ರಾವೋ 2016ರ ಸೆಪ್ಟಂಬರ್‌ನಲ್ಲಿ ಪಾಕಿಸ್ತಾನ ವಿರುದ್ಧ ಟಿ-20 ಪಂದ್ಯವನ್ನು ಆಡಿರುವುದೇ ಕೊನೆಯ ಅಂತಾರಾಷ್ಟ್ರೀಯ ಪಂದ್ಯವಾಗಿದೆ. ವಿಂಡೀಸ್ ಆಯ್ಕೆ ಸಮಿತಿ ಇತ್ತೀಚಿಗಷ್ಟೇ ದೈತ್ಯ ಕ್ರಿಸ್ಗೇಲ್ರನ್ನು ಏಕದಿನ ಕ್ರಿಕೆಟ್‌ಗೆ ಆಯ್ಕೆ ಮಾಡಿತ್ತು.
ಐರ್ಲೆಂಡ್ನಲ್ಲಿ ನಡೆದ ಬಾಂಗ್ಲಾ ಹಾಗೂ ಐರ್ಲೆಂಡ್ ತಂಡಗಳನ್ನೊಳಗೊಂಡ ತ್ರಿಕೋನ ಸರಣಿಯಲ್ಲಿ ಸೋಲನುಭವಿಸಿದ ಬೆನ್ನಲ್ಲೇ ವಿಂಡೀಸ್ ಆಡಳಿತ ಮಂಡಳಿ ಹಿರಿಯ ಆಟಗಾರರನ್ನು ಸ್ಟ್ಯಾಂಡ್ ಬೈ ಆಗಿ ನೇಮಿಸಿಕೊಂಡಿದೆ. ವೆಸ್ಟ್ ಇಂಡೀಸ್ ತಂಡ ಮೇ 31ರಂದು ಪಾಕಿಸ್ತಾನ ವಿರುದ್ಧ ತನ್ನ ಮೊದಲ ಪಂದ್ಯವನ್ನಾಡಲಿದೆ.