ಬೆತುಲ್(ಮಧ್ಯಪ್ರದೇಶ): ಮನುಷ್ಯನಿಗೆ ಹೃದಯಾಘಾತ ಯಾವಾಗ ಬರುತ್ತದೆ ಎಂದು ಯಾರೂ ಊಹಿಸಲು ಸಾಧ್ಯವಾಗದಂತಹ ಸ್ಥಿತಿ ನಿರ್ಮಾಣವಾಗಿದೆ. ಕ್ರಿಕೆಟ್ ದಂತಕಥೆ ಶೇನ್ ವಾರ್ನ್ ನಿನ್ನೆಯಷ್ಟೇ ಹೃದಯಘಾತಕ್ಕೊಳಗಾಗಿ ಪ್ರಾಣಬಿಟ್ಟಿದ್ದಾರೆ. ಇದೀಗ ಮಧ್ಯಪ್ರದೇಶದ ವ್ಯಕ್ತಿಯೋರ್ವನಿಗೆ ಆಸ್ಪತ್ರೆಯಲ್ಲಿದ್ದಾಗಲೇ ಹಾರ್ಟ್ ಅಟ್ಯಾಕ್ ಆಗಿದ್ದು, ತುರ್ತು ಚಿಕಿತ್ಸೆ ನೀಡಿರುವ ವೈದ್ಯರು ಆತನ ಜೀವ ಉಳಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಆಸ್ಪತ್ರೆಯಲ್ಲಿದ್ದಾಗಲೇ ಯುವಕನಿಗೆ ಹೃದಯಾಘಾತ ಮಧ್ಯಪ್ರದೇಶದ ಬೆತುಲ್ನಲ್ಲಿರುವ ಖಾಸಗಿ ಆಸ್ಪತ್ರೆಯಲ್ಲಿ ನಡೆದಿರುವ ಘಟನೆವೊಂದರ ವಿಡಿಯೋ ಇದೀಗ ವೈರಲ್ ಆಗಿದ್ದು, ಚಿಕಿತ್ಸೆಗೋಸ್ಕರ ಬಂದಿದ್ದ ಯುವಕನೋರ್ವನಿಗೆ ಹೃದಯಾಘಾತವಾಗಿದೆ.
ಇದನ್ನೂ ಓದಿರಿ:ಹವಾಲಾ ದಂಧೆ ನಡೆಸುತ್ತಿದ್ದವರ ಮೇಲೆ ದಾಳಿ.. ₹4.2 ಕೋಟಿ ವಶಕ್ಕೆ ಪಡೆದ ಪೊಲೀಸ್
ಘಟನೆಯ ವಿವರ: ವೃತ್ತಿಯಲ್ಲಿ ಕ್ರಿಕೆಟಿಗನಾಗಿರುವ 25 ವರ್ಷದ ಯುವಕನಿಗೆ ಫೆ.21ರ ಸಂಜೆ ಎದೆನೋವು ಕಾಣಿಸಿಕೊಂಡಿದ್ದು, ಅದನ್ನ ಆತ ನಿರ್ಲಕ್ಷಿಸಿದ್ದಾನೆ. ರಾತ್ರಿ 11 ಗಂಟೆ ವೇಳೆಗೆ ಎದೆನೋವು ತೀವ್ರವಾಗಿದೆ. ಹೀಗಾಗಿ, ಕುಟುಂಬಸ್ಥರು ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದಾರೆ. ಈ ವೇಳೆ ಖುರ್ಚಿ ಮೇಲೆ ಕುಳಿತುಕೊಂಡಾಗ ಹೃದಯಾಘಾತವಾಗಿ ಏಕಾಏಕಿ ಕೆಳಗೆ ಕುಸಿದು ಬಿದ್ದಿದ್ದಾನೆ. ಆತನ ಉಸಿರಾಟ ಸಂಪೂರ್ಣವಾಗಿ ನಿಂತು ಹೋಗಿತ್ತು.
ತಕ್ಷಣವೇ ನೆಲದ ಮೇಲೆಯೇ ಆತನಿಗೆ ಸುಮಾರು 15-20 ನಿಮಿಷಗಳ ಕಾಲ ವೈದ್ಯರು ಚಿಕಿತ್ಸೆ ನೀಡಿದ್ದಾರೆ. ಪರಿಣಾಮ ಉಸಿರಾಡಲು ಶುರು ಮಾಡಿದ್ದಾನೆ. ನಂತರ ಐಸಿಯುಗೆ ಸ್ಥಳಾಂತರ ಮಾಡಿ ಚಿಕಿತ್ಸೆ ನೀಡಲಾಗ್ತಿದ್ದು, ಚೇತರಿಸಿಕೊಳ್ಳುತ್ತಿದ್ದಾನೆಂದು ತಿಳಿದು ಬಂದಿದೆ. ಸಮಯಕ್ಕೆ ಸರಿಯಾಗಿ ಚಿಕಿತ್ಸೆ ಲಭ್ಯವಾಗದೇ ಹೋಗಿದ್ದರೆ ಯುವಕ ಸಾವನ್ನಪ್ಪುತ್ತಿದ್ದನೆಂಬ ಮಾತುಗಳು ಕೇಳಿ ಬಂದಿವೆ.