ನವದೆಹಲಿ: ಕಾಶ್ಮೀರಿ ಪ್ರತ್ಯೇಕತಾವಾದಿ ನಾಯಕ ಯಾಸಿನ್ ಮಲಿಕ್‌ನನ್ನು ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ಹಾಜರುಪಡಿಸಿದ ಪ್ರಕರಣಕ್ಕೆ ಸಂಬಂಧಿಸಿದಂತೆ ತಿಹಾರ್ ಜೈಲಿನ ನಾಲ್ವರ ಅಧಿಕಾರಿಗಳನ್ನು ಅಮಾನತು ಮಾಡಲಾಗಿದೆ. ಮಲಿಕ್‌ನನ್ನು ದೈಹಿಕ ಅಥವಾ ಖುದ್ದಾಗಿ ಹಾಜರು ಪಡಿಸಲು ನಿಷೇಧವಿದ್ದರೂ ಸಹ ಆತನನ್ನು ಜೈಲಿನ ವ್ಯಾನ್‌ನಲ್ಲಿ ಶುಕ್ರವಾರ ನ್ಯಾಯಾಲಯದ ಆವರಣಕ್ಕೆ ಕರೆತರುವ ಮೂಲಕ ಈ ಆದೇಶವನ್ನು ಉಲ್ಲಂಘಿಸಲಾಗಿತ್ತು.
ಭಯೋತ್ಪಾದನೆಗೆ ಹಣಕಾಸು ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ಅನುಭವಿಸುತ್ತಿರುವ ಯಾಸಿನ್ ಮಲಿಕ್‌ನನ್ನು ಖುದ್ದು ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು ಸಾಕಷ್ಟು ವಿವಾದವನ್ನು ಸೃಷ್ಟಿಸಿತ್ತು. ಮಲಿಕ್‌ನನ್ನು ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರುಪಡಿಸುವಂತೆ ಸೂಚನೆ ಇದ್ದರೂ ಆತನನ್ನು ನ್ಯಾಯಾಲಯಕ್ಕೆ ಖುದ್ದು ಹಾಜರುಪಡಿಸಲಾಗಿದ್ದು, ಇದು ಅಧಿಕಾರಿಗಳ ಕಡೆಯಿಂದ ನಡೆದ ಗಂಭೀರ ಭದ್ರತಾ ಲೋಪ ಎಂದು ಜೈಲು ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದೇ ಘಟನೆಗೆ ಸಂಬಂಧಿಸಿದಂತೆ ಇದೀಗ ತಿಹಾರ್ ಜೈಲಿನ ಉಪ ಅಧೀಕ್ಷಕರು, ಇಬ್ಬರು ಸಹಾಯಕ ಅಧೀಕ್ಷಕರು ಮತ್ತು ಒಬ್ಬ ಮುಖ್ಯ ವಾರ್ಡನ್ ಸೇರಿದಂತೆ ನಾಲ್ವರು ಅಧಿಕಾರಿಗಳನ್ನು ದೆಹಲಿ ಕಾರಾಗೃಹಗಳ ಪ್ರಾಧಿಕಾರವು ಅಮಾನತುಗೊಳಿಸಿದೆ. ಇದರೊಂದಿಗೆ ಮಹಾನಿರ್ದೇಶಕರು (ಜೈಲುಗಳು) ಸಂಜಯ್ ಬನಿವಾಲ್ ಅವರು ಈ ಬಗ್ಗೆ ತನಿಖೆಗೂ ಆದೇಶಿಸಿದ್ದಾರೆ. ಉಪ ಮಹಾನಿರೀಕ್ಷಕ (ಜೈಲುಗಳ ಪ್ರಧಾನ ಕಚೇರಿ) ರಾಜೀವ್ ಸಿಂಗ್ ಅವರು ವಿಚಾರಣೆ ನಡೆಸಿ ಮೂರು ದಿನಗಳೊಳಗೆ ತಮ್ಮ ವರದಿ ಸಲ್ಲಿಸುವಂತೆ ಸೂಚಿಸಲಾಗಿದೆ.