ನವದೆಹಲಿ: 'ನಾರಿ ಶಕ್ತಿ ವಂದನ್ ಅಧಿನಿಯಮ್ 2023' ಮಸೂದೆಗೆ ಬೆಂಬಲ ವ್ಯಕ್ತಪಡಿಸಿದ ಸೋನಿಯಾ ಗಾಂಧಿ, ಇದನ್ನು ತಕ್ಷಣ ಜಾರಿಗೆ ತರಬೇಕೆಂದು ಒತ್ತಾಯಿಸಿದ್ದಾರೆ. ಕಾಂಗ್ರೆಸ್ ಸಂಸದೀಯ ಪಕ್ಷದ ಅಧ್ಯಕ್ಷೆ ಸೋನಿಯಾ ಗಾಂಧಿ ಅವರು ಸಂಸತ್ತಿನ ವಿಶೇಷ ಅಧಿವೇಶನದ ಮೂರನೇ ದಿನವಾದ ಬುಧವಾರ ಲೋಕಸಭೆಯಲ್ಲಿ ಮಹಿಳಾ ಮೀಸಲಾತಿ ಮಸೂದೆಯ ಮೇಲಿನ ಚರ್ಚೆಯನ್ನು ಪ್ರಾರಂಭಿಸಿ ಮಾತನಾಡಿದರು. ಮಸೂದೆಯನ್ನು ಜಾರಿಯ ವಿಳಂಬ ಎಂದರೆ ಅದು ದೇಶದ ಮಹಿಳೆಯರಿಗೆ ಅನ್ಯಾಯ ಎಸಗಿದಂತೆ ಎಂದು ಅವರು ಹೇಳಿದರು.
"ನಾನು ನಾರಿ ಶಕ್ತಿ ವಂದನ್ ಅಧಿನಿಯಮ್ 2023 ಅನ್ನು ಬೆಂಬಲಿಸುತ್ತೇನೆ. ಈ ಮಸೂದೆ ಕಾನೂನಾಗಲು ಇನ್ನೂ ಕಾಯಬೇಕಿದೆ ಎಂದು ಮಹಿಳೆಯರಿಗೆ ಹೇಳಲಾಗುತ್ತಿದೆ. ಆದರೆ ಮಸೂದೆಯನ್ನು ತಕ್ಷಣವೇ ಕಾನೂನನ್ನಾಗಿ ಮಾಡಬೇಕೆಂದು ನಾವು ಒತ್ತಾಯಿಸುತ್ತಿದ್ದೇವೆ. ಮಸೂದೆ ಜಾರಿಯಲ್ಲಿನ ವಿಳಂಬವು ದೇಶದ ಮಹಿಳೆಯರಿಗೆ ಮಾಡುವ ಅನ್ಯಾಯ. ತಕ್ಷಣವೇ ಮಸೂದೆಯನ್ನು ಕಾನೂನಾಗಿ ಮಾಡುವಂತೆ ನಾನು ಸರ್ಕಾರಕ್ಕೆ ಮನವಿ ಮಾಡುತ್ತೇನೆ" ಎಂದು ಸೋನಿಯಾ ಗಾಂಧಿ ಲೋಕಸಭೆಯಲ್ಲಿ ಹೇಳಿದರು.
ಇತರ ಹಿಂದುಳಿದ ವರ್ಗ / ಪರಿಶಿಷ್ಟ ಜಾತಿ (ಒಬಿಸಿ / ಎಸ್ಸಿ) ಸಮುದಾಯಗಳಿಗೆ ಸೇರಿದ ಮಹಿಳೆಯರಿಗೂ ಸೂಕ್ತ ಮೀಸಲಾತಿ ಅವಕಾಶ ಸಿಗುವಂತೆ ಜಾತಿ ಗಣತಿ ನಡೆಸಬೇಕೆಂದು ಅವರು ಒತ್ತಾಯಿಸಿದರು. ಲೋಕಸಭೆಯಲ್ಲಿ ತಮ್ಮ ಭಾಷಣಕ್ಕೂ ಮುನ್ನ ಮಾತನಾಡಿದ ಸೋನಿಯಾ ಗಾಂಧಿ, "ಇದು ರಾಜೀವ್ ಜಿ ಅವರ ಕನಸಿನ ಮಸೂದೆಯಾಗಿತ್ತು " ಎಂದು ಹೇಳಿದರು.