ನವದೆಹಲಿ:ಲೋಕಸಭೆಯಲ್ಲಿ ಮಂಡನೆಯಾದ ಮಹಿಳಾ ಮೀಸಲಾತಿ ಮಸೂದೆಯನ್ನು ಕೇಂದ್ರ ಸರ್ಕಾರ 2027 ರ ವೇಳೆಗೆ ಜಾರಿಗೆ ತರಲಾಗುವುದು ಎಂದು ಭರವಸೆ ನೀಡಿದ್ದರೂ, ಅದು 2029 ರ ನಂತರವೇ ಅನುಷ್ಠಾನಕ್ಕೆ ಬರಲು ಸಾಧ್ಯ ಎಂಬುದು ತಜ್ಞರ ಅಭಿಪ್ರಾಯವಾಗಿದೆ. ಇದಕ್ಕೆ ಕಾರಣ, ಜನಗಣತಿ ಮತ್ತು ವಿಧಾನಸಭಾ ಕ್ಷೇತ್ರಗಳ ಪುನರ್ವಿಂಗಡಣೆ ಕಾರ್ಯ.
ಹೌದು, ಲೋಕಸಭೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಸರ್ಕಾರ ಮಹಿಳಾ ಮೀಸಲಾತಿ ಮಸೂದೆಯನ್ನು ಮಂಡಿಸಿದೆ. ನಾಳೆ ರಾಜ್ಯಸಭೆಯಲ್ಲಿ ಅದು ಟೇಬಲ್ ಆಗಲಿದೆ. ಚರ್ಚೆ ಬಳಿಕ ಅಂಗೀಕರವಾದಲ್ಲಿ ಜಾರಿಯಾಗೋದು ಮಾತ್ರ 6 ವರ್ಷಗಳ ನಂತರವೇ. ಅಷ್ಟು ವಿಳಂಬವಾಗಲು ಎರಡು ಪ್ರಮುಖ ಕಾರಣಗಳಿವೆ.
ಮಹಿಳಾ ಮೀಸಲಾತಿ ಮಸೂದೆಯು ಸಾಂವಿಧಾನಿಕ ತಿದ್ದುಪಡಿ ಮಸೂದೆಯಾಗಿರುವುದರಿಂದ ಸಂಸತ್ತಿನ ಎರಡೂ ಸದನಗಳು ಮತ್ತು ದೇಶಾದ್ಯಂತ ಅರ್ಧದಷ್ಟು ರಾಜ್ಯಗಳು ಈ ಮಸೂದೆಗೆ ತಮ್ಮ ಅನುಮೋದನೆಯನ್ನು ನೀಡಬೇಕಾಗಿದೆ. ವಿಧಾನಸಭಾ ಕ್ಷೇತ್ರಗಳ ವಿಂಗಡಣೆ ಪ್ರಕ್ರಿಯೆ ಪೂರ್ಣಗೊಂಡ ಬಳಿಕವಷ್ಟೇ ವಿಧಾನಸಭೆಗಳಲ್ಲಿ ಮಹಿಳಾ ಮೀಸಲಾತಿ ಜಾರಿಗೆ ಬರಲಿದೆ ಎಂದು ಮಸೂದೆಯಲ್ಲಿ ಹೇಳಲಾಗಿದೆ.
2002 ರಲ್ಲಿ 82 ನೇ ವಿಧಿಯ ತಿದ್ದುಪಡಿಯ ಪ್ರಕಾರ, 2026 ರ ನಂತರದ ಜನಗಣತಿಯ ಆಧಾರದ ಮೇಲೆ ಕ್ಷೇತ್ರಗಳ ಪುನರ್ವಿಂಗಡಣೆ ನಡೆಸಬೇಕಿದೆ. ಅದರೆ, ಮುಂದಿನ ಜನಗಣತಿ 2031ರಲ್ಲಿಯೇ ನಡೆಯಲಿದೆ. ಕೋವಿಡ್‌ನಿಂದಾಗಿ 2021 ರಲ್ಲಿ ನಡೆಯಬೇಕಿದ್ದ ಜನಗಣತಿಯನ್ನು ಕೇಂದ್ರ ಸರ್ಕಾರ ಮುಂದೂಡಿತ್ತು. ಮುಂದೆ ಯಾವಾಗ ನಡೆಯಲಿದೆ ಎಂಬುದು ನಿಖರವಾಗಿ ತಿಳಿದಿಲ್ಲ. ಮೊದಲು ಜನಗಣತಿ ನಡೆಸಿ, ಬಳಿಕ 2026ರಲ್ಲಿ ಕ್ಷೇತ್ರಗಳ ಪುನರ್ ವಿಂಗಡಣೆ ಮಾಡಲು ಕೇಂದ್ರ ಉದ್ದೇಶಿಸಿದೆ.
2027ರ ವೇಳೆಗೆ ವಿಧಾನಸಭೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲಾಗುವುದು ಎಂದು ಪ್ರಧಾನಿ ನರೇಂದ್ರ ಮೋದಿ ಅವರು ಸಂಸತ್ತಿನಲ್ಲಿ ಹೇಳಿದ್ದಾರೆ. ಹಾಗೆ ನಡೆದರೆ 2027ರಿಂದ ವಿಧಾನಸಭಾ ಚುನಾವಣೆ ಹಾಗೂ 2029ರ ಸಾರ್ವತ್ರಿಕ ಚುನಾವಣೆಯಲ್ಲಿ ಮಹಿಳಾ ಮೀಸಲಾತಿ ಜಾರಿಗೆ ತರಲು ಸಾಧ್ಯವಾಗಲಿದೆ.
ಮಹಿಳಾ ಮೀಸಲಾತಿ ಮಸೂದೆ ಇತಿಹಾಸ:ಕೇಂದ್ರವು 2011 ರ ಫೆಬ್ರವರಿ-ಮಾರ್ಚ್‌ನಲ್ಲಿ ಜನಗಣತಿಯನ್ನು ನಡೆಸಿತು. ಅದೇ ವರ್ಷದ ಮಾರ್ಚ್ 31 ರಂದು ಅಂಕಿಅಂಶಗಳನ್ನು ಬಿಡುಗಡೆ ಮಾಡಿತು. 2027ರಲ್ಲಿ ಕ್ಷೇತ್ರ ಪುನರ್ ವಿಂಗಡಣೆ ಪ್ರಕ್ರಿಯೆ ಕೈಗೆತ್ತಿಕೊಂಡರೆ ತಿಂಗಳೊಳಗೆ ಪೂರ್ಣಗೊಳ್ಳಬಹುದು. ಆಗ ಶಾಸನಸಭೆಗಳಲ್ಲಿ ಮಹಿಳಾ ಮೀಸಲಾತಿ ನೀಡಬಹುದು. ಈಗ ಮಂಡಿಸಿರುವ ಮೀಸಲಾತಿ ಮಸೂದೆಯು 15 ವರ್ಷಗಳವರೆಗೆ ಮಾತ್ರ ಮಾನ್ಯವಾಗಿರುತ್ತದೆ. ಇದು ಅಗತ್ಯವೆಂದು ಕಂಡುಬಂದಲ್ಲಿ ಆ ನಂತರವೂ ಅವಧಿಯನ್ನು ವಿಸ್ತರಿಸುವ ಆಯ್ಕೆಯನ್ನು ಸಂಸತ್ತು ಹೊಂದಿದೆ.
ಇದನ್ನೂ ಓದಿ:Women's reservation bill : ಮಹಿಳಾ ಮೀಸಲಾತಿ ಮಸೂದೆ ಸಾಗಿ ಬಂದ ಹಾದಿ