ಕುರುಕ್ಷೇತ್ರ: ಕಾಂಗ್ರೆಸ್ನ ರಾಹುಲ್ ಗಾಂಧಿ ನೇತೃತ್ವದ ಭಾರತ್ ಜೋಡೋ ಯಾತ್ರೆಯಲ್ಲಿ ಇಂದು ಮಹಿಳಾ ಮಣಿಗಳು ಹೆಚ್ಚಿನ ಸಂಖ್ಯೆಯಲ್ಲಿ ಹೆಜ್ಜೆ ಹಾಕಲಿದ್ದು, ಈ ದಿನದ ಯಾತ್ರೆ ಮಹಿಳೆಯರ ಬೆಂಬಲಕ್ಕೆ ಸಾಕ್ಷಿಯಾಗಲಿದೆ ಎಂದು ಪಕ್ಷದ ಸಂಸದೆ ಜ್ಯೋತಿಮಣಿ ಟ್ವಿಟರ್ನಲ್ಲಿ ತಿಳಿಸಿದ್ದಾರೆ. ಈ ವಿಚಾರವಾಗಿ ನಿನ್ನೆ ಟ್ವೀಟ್ ಮಾಡಿರುವ ಅವರು, ಭಾರತ್ ಜೋಡೋ ಯಾತ್ರೆಯಲ್ಲಿ ಮಹಿಳೆಯರು ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಲಿದ್ದಾರೆ. ರಾಹುಲ್ ಗಾಂಧಿ, ಮಹಿಳಾ ಸಬಲೀಕರಣವನ್ನು ಎದುರು ನೋಡುತ್ತಿದ್ದಾರೆ ಎಂದು ತಿಳಿಸಿದ್ದಾರೆ. ಪಕ್ಷದ ಹಿರಿಯ ನಾಯಕ ಜೈ ರಾಮ್ ರಮೇಶ್ ಕೂಡ ಈ ಟ್ವೀಟ್ ಅನ್ನು ರಿಟ್ವೀಟ್ ಮಾಡಿದ್ದಾರೆ.
ಕಳೆದ ತಿಂಗಳು ಡಿಸೆಂಬರ್ನಲ್ಲಿ ಯಾತ್ರೆ ರಾಜಸ್ಥಾನದ ಸವಾಯಿ ಮಾಧೋಪುರ್ ಜಿಲ್ಲೆಯ ಪೀಪುಲ್ವಾಡಾದಲ್ಲಿ ಸಾಗುತ್ತಿದ್ದಾಗ ಮಹಿಳಾ ಸಶಕ್ತಿಕರಣ ದಿವಸ್ ಅಂಗವಾಗಿ ರಾಹುಲ್ ಗಾಂಧಿ ಮಹಿಳೆಯರ ಜೊತೆ ಭಾರತ್ ಜೋಡೋ ಯಾತ್ರೆ ನಡೆಸುವ ಮೂಲಕ ಆ ದಿನ ಆಚರಿಸಿದ್ದರು. ಇದೇ ರೀತಿಯ ಘಟನೆ ನವೆಂಬರ್ನಲ್ಲೂ ನಡೆದಿತ್ತು. ನವೆಂಬರ್ 19ರಂದು ಇಂದಿರಾ ಗಾಂಧಿ ಜಯಂತಿ ಹಿನ್ನೆಲೆಯಲ್ಲಿ ಭಾರತ್ ಜೋಡೋ ಯಾತ್ರೆಯಲ್ಲಿ ಕಾಂಗ್ರೆಸ್ ನಾಯಕನ ಜೊತೆ ಮಹಿಳೆಯರು ಹೆಜ್ಜೆ ಹಾಕಿದ್ದರು.
ನಿನ್ನೆ ಮಾಜಿ ರಕ್ಷಣಾ ಅಧಿಕಾರಿಗಳು ಭಾಗಿ: ಭಾನುವಾರದ ಯಾತ್ರೆಯಲ್ಲಿ ಮಾಜಿ ಸೇನಾ ಮುಖ್ಯಸ್ಥ ಜನರಲ್ ದೀಪಕ್ ಕಪೂರ್ ಮತ್ತು ಇತರ ನಿವೃತ್ತ ಉನ್ನತ ರಕ್ಷಣಾ ಅಧಿಕಾರಿಗಳು ಭಾಗಿಯಾಗಿದ್ದರು. ಲೆಫ್ಟಿನೆಂಟ್ ಜನರಲ್ ಆರ್.ಕೆ.ಹೂಡಾ, ಲೆಫ್ಟಿನೆಂಟ್ ಜನರಲ್ ವಿ.ಕೆ.ನರುಲಾ, ಏರ್ ಮಾರ್ಷಲ್ ಪಿ.ಎಸ್.ಭಂಗು, ಮೇಜರ್ ಜನರಲ್ ಸತ್ಬೀರ್ ಸಿಂಗ್ ಚೌಧರಿ, ಮೇಜರ್ ಜನರಲ್ ಧರ್ಮೇಂದರ್ ಸಿಂಗ್, ಕರ್ನಲ್ ಜಿತೇಂದರ್ ಗಿಲ್, ಕರ್ನಲ್ ಪುಷ್ಪೇಂದರ್ ಸಿಂಗ್, ಲೆಫ್ಟಿನೆಂಟ್ ಜನರಲ್ ಡಿಡಿಎಸ್ ಸಂಧು, ಮೇಜರ್ ಜನರಲ್ ಬಿಷಂಬರ್ ದಯಾಳ್ ಮತ್ತು ಕರ್ನಲ್ ರೋಹಿತ್ ಚೌಧರಿ ಭಾರತ್ ಜೋಡೋ ಯಾತ್ರೆಯಲ್ಲಿ ರಾಹುಲ್ ಗಾಂಧಿ ಜೊತೆ ಹೆಜ್ಜೆ ಹಾಕಿದ್ದರು. ಇದಕ್ಕೂ ಮುನ್ನ, ಭಾರಿ ಚಳಿ ಮತ್ತು ಮಂಜು ಕವಿದ ವಾತಾವರಣದಲ್ಲೇ ಅನೇಕ ಬೆಂಬಲಿಗರು ಶರ್ಟ್‌ರಹಿತವಾಗಿ ಡ್ಯಾನ್ಸ್ ಮಾಡುವ ಮೂಲಕ ರಾಹುಲ್ ಗಾಂಧಿ ಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದ್ದರು.