ನವದೆಹಲಿ:ಮಾನ್ಸೂನ್ ಅಧಿವೇಶನ ಆರಂಭಗೊಂಡಾಗಿನಿಂದಲೂ ರಾಜ್ಯಸಭೆ ಹಾಗೂ ಲೋಕಸಭೆಯಲ್ಲಿ ಸರಿಯಾಗಿ ಕಲಾಪ ನಡೆದಿಲ್ಲ. ನಿತ್ಯ ವಿಪಕ್ಷಗಳು ಪೆಗಾಸಸ್, ಕೃಷಿ ಕಾಯ್ದೆ, ಪೆಟ್ರೋಲ್-ಡಿಸೇಲ್ ಬೆಲೆ ಏರಿಕೆ ವಿಚಾರವನ್ನಿಟ್ಟುಕೊಂಡು ಗದ್ದಲ ನಡೆಸಿದ್ದು, ಪ್ರತಿಭಟನೆ ಸಹ ನಡೆಸಿವೆ. ಇದೇ ವಿಚಾರವಾಗಿ ಕೇಂದ್ರ ಸರ್ಕಾರ ಪ್ರತಿಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದು, ಇದರ ಬೆನ್ನಲ್ಲೇ ಮಹತ್ವದ ವಿಡಿಯೋವೊಂದನ್ನ ರಿಲೀಸ್ ಮಾಡಿದೆ.
ರಾಜ್ಯಸಭೆಯಲ್ಲಿ ಮಹಿಳಾ ಸಂಸದೆಯೊಬ್ಬಳನ್ನು ಅಲ್ಲಿನ ಮಾರ್ಷಲ್ಗಳು ನಿಂದಿಸಿದ್ದಾರೆಂಬ ಪ್ರತಿಪಕ್ಷಗಳು ಆರೋಪ ಮಾಡಿದ್ದು, ಇದನ್ನ ತಳ್ಳಿ ಹಾಕಿರುವ ಕೇಂದ್ರ ಸರ್ಕಾರ, ಘಟನೆಯ ಸಿಸಿಟಿವಿ ದೃಶ್ಯ ರಿಲೀಸ್ ಮಾಡಿದೆ. ಇದರಲ್ಲಿ ಮಾರ್ಷಲ್ಗಳ ಮೇಲೆ ಹಲ್ಲೆ ನಡೆಸಲು ಮುಂದಾಗಿರುವ ಘಟನೆ ನಡೆದಿದೆ. ಕೇಂದ್ರ ಸರ್ಕಾರದ ವಿರುದ್ಧ ಪ್ರತಿಪಕ್ಷಗಳು ತಪ್ಪು ಮಾಹಿತಿ ಹರಡುತ್ತಿವೆ ಎಂದು ಸಂಸದೀಯ ವ್ಯವಹಾರಗಳ ಸಚಿವ ಪ್ರಹ್ಲಾದ್ ಜೋಶಿ ಹೇಳಿದ್ದಾರೆ.
ಸುಮಾರು 2.5 ನಿಮಿಷಗಳ ವಿಡಿಯೋ ಇದೀಗ ರಿಲೀಸ್ ಆಗಿದ್ದು, ಇದರಲ್ಲಿ ಪ್ರತಿಪಕ್ಷ ಸಂಸದರು ಹಾಗೂ ಮಾರ್ಷಲ್ಗಳ ನುಡುವೆ ಗಲಾಟೆ ನಡೆದಿದೆ. ಇದೇ ವಿಷಯವಾಗಿ ರಾಹುಲ್ ಗಾಂಧಿ ಸೇರಿದಂತೆ ಅನೇಕರು ಸದನದ ಹೊರಗೆ ಪ್ರತಿಭಟನೆ ನಡೆಸಿದ್ದರು. ಪ್ರಕರಣಕ್ಕೆ ಸಂಬಂಧಿಸಿದಂತೆ ರಾಜ್ಯಸಭೆ ಅಧ್ಯಕ್ಷ ವೆಂಕಯ್ಯ ನಾಯ್ಡು ಪ್ರಕರಣ ದಾಖಲಿಸಬೇಕೆಂದು ಆಗ್ರಹಿಸಿದ್ದರು.