ಕರ್ನಾಟಕ

karnataka

ETV Bharat / bharat

ವಿಧಾನಸಭೆ ಚುನಾವಣೆ : ಕೇರಳ- ಕರ್ನಾಟಕ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ

ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆ ಕೇರಳ ಮತ್ತು ಕರ್ನಾಟಕ ಗಡಿಯಲ್ಲಿ ಪೊಲೀಸರು ಚೆಕ್​ಪೋಸ್ಟ್​​ಗಳನ್ನು ಸ್ಥಾಪಿಸಿ ವಾಹನಗಳನ್ನು ತೀವ್ರ ತಪಾಸಣೆ ನಡೆಸುತ್ತಿದ್ದಾರೆ.

with-the-announcement-of-assembly-elections-the-inspection-on-the-kerala-karnataka-border-has-been-intensified
ವಿಧಾನಸಭೆ ಚುನಾವಣೆ : ಕೇರಳ- ಕರ್ನಾಟಕ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ

By

Published : Apr 2, 2023, 7:51 PM IST

ವಿಧಾನಸಭೆ ಚುನಾವಣೆ : ಕೇರಳ- ಕರ್ನಾಟಕ ಗಡಿಭಾಗದಲ್ಲಿ ತೀವ್ರ ಕಟ್ಟೆಚ್ಚರ

ಕಾಸರಗೋಡು(ಕೇರಳ) : ಕರ್ನಾಟಕದಲ್ಲಿ ವಿಧಾನಸಭೆ ಚುನಾವಣೆ ಘೋಷಣೆಯಾಗಿದ್ದು, ಚುನಾವಣಾ ನೀತಿ ಸಂಹಿತೆಯನ್ನು ಜಾರಿಗೊಳಿಸಲಾಗಿದೆ. ಈ ಹಿನ್ನೆಲೆ ಕರ್ನಾಟಕ ಮತ್ತು ಕೇರಳದ ವಿವಿಧ ಗಡಿಭಾಗಗಳಲ್ಲಿ ಕರ್ನಾಟಕವನ್ನು ಪ್ರವೇಶಿಸುವ ವಾಹನಗಳನ್ನು ಪೊಲೀಸರು ತಪಾಸಣೆ ನಡೆಸುತ್ತಿದ್ದಾರೆ. ಕರ್ನಾಟಕವನ್ನು ಸಂಪರ್ಕಿಸುವ ಕೇರಳದ ಗಡಿ ಭಾಗಗಳಲ್ಲಿ ಚೆಕ್​ ಪೋಸ್ಟ್​ಗಳನ್ನು ಹಾಕಿರುವ ಕರ್ನಾಟಕ ಪೊಲೀಸರು ವಾಹನಗಳ ತಪಾಸಣೆಯನ್ನು ಚುರುಕುಗೊಳಿಸಿದ್ದಾರೆ. ಕರ್ನಾಟಕದಲ್ಲಿ ಚುನಾವಣಾ ನೀತಿ ಸಂಹಿತೆ ಜಾರಿ ಇರುವುದರಿಂದ ಗಡಿಗಳಲ್ಲಿ ಸಂಚರಿಸುವ ವಾಹನಗಳ ಮೇಲೆ ಹೆಚ್ಚಿನ ನಿಗಾ ವಹಿಸಲಾಗಿದೆ.

ಇನ್ನು, ಕೇರಳದಿಂದ ಕರ್ನಾಟಕಕ್ಕೆ ವಿವಿಧ ಉದ್ದೇಶಗಳಿಗೆ ಸಂಚರಿಸುವ ಜನರು ತಮ್ಮ ಜೊತೆಯಲ್ಲಿ ಹೆಚ್ಚಿನ ಮೊತ್ತದ ಹಣವನ್ನು ಒಯ್ಯುವಾಗ ಅದಕ್ಕೆ ಸಂಬಂಧಿಸಿದ ದಾಖಲೆಗಳನ್ನು ಹೊಂದಿರುವಂತೆ ಸೂಚಿಸಲಾಗಿದೆ. 50 ಸಾವಿರಕ್ಕಿಂತ ಹೆಚ್ಚು ಹಣ ಒಯ್ಯುವವರು ಸೂಕ್ತ ದಾಖಲೆಗಳನ್ನು ಚುನಾವಣಾ ಅಧಿಕಾರಿಗಳಿಗೆ ನೀಡಬೇಕು. ಒಂದು ವೇಳೆ ದಾಖಲೆಗಳನ್ನು ನೀಡಲು ವಿಫಲವಾದರೆ ಈ ಹಣವನ್ನು ಮುಟ್ಟುಗೋಲು ಹಾಕಲಾಗುತ್ತದೆ ಎಂದು ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಕಾಸರಗೋಡು ಮತ್ತು ಮಂಗಳೂರು ನಡುವಿನ ಪ್ರಮುಖ ಗಡಿಭಾಗವಾದ ತಲಪಾಡಿಯಲ್ಲಿ, ಕರ್ನಾಟಕ ಪೊಲೀಸರು ಚೆಕ್​ ಪೋಸ್ಟ್​ಗಳನ್ನು ತೆರೆದಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ಸಂಚರಿಸುವ ವಾಹನಗಳನ್ನು ಸೂಕ್ತ ತಪಾಸಣೆ ನಡೆಸಿದ ನಂತರವೇ ಕರ್ನಾಟಕ ಪ್ರವೇಶಕ್ಕೆ ಅನುವು ಮಾಡಿಕೊಡಲಾಗುತ್ತಿದೆ. ಜೊತೆಗೆ ವಾಹನ ಸವಾರರ ಮೊಬೈಲ್​ ಸಂಖ್ಯೆಯನ್ನು ಪೊಲೀಸರು ಪಡೆಯುತ್ತಿದ್ದಾರೆ.

ಅಷ್ಟೇ ಅಲ್ಲದೆ ಏನಾದರೂ ಅನುಮಾನಾಸ್ಪದವಾಗಿ ಕಂಡುಬಂದಲ್ಲಿ ಎರಡು ಹಂತಗಳಲ್ಲಿ ವಾಹನ ತಪಾಸಣೆ ನಡೆಸಲಾಗುತ್ತಿದೆ. ತಪಾಸಣೆ ವೇಳೆ ವಶಪಡಿಕೊಂಡ ದಾಖಲೆ ಇಲ್ಲದ ಹಣವನ್ನು ಚುನಾವಣೆ ನಂತರ ಹಿಂತಿರುಗಿಸಲಾಗುವುದು. ಸೂಕ್ತ ದಾಖಲೆಗಳಿಲ್ಲದೆ ಹೆಚ್ಚಿನ ಹಣವನ್ನು ಕೊಂಡೊಯ್ಯದಂತೆ ಅಧಿಕಾರಿಗಳು ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ. ಕೇರಳದಿಂದ ಕರ್ನಾಟಕಕ್ಕೆ ಗಡಿ ಭಾಗದಿಂದ ಹಲವು ಉದ್ದೇಶಗಳಿಗೆ ಸಾವಿರಾರು ಜನರು ದಿನನಿತ್ಯ ಸಂಚಾರ ನಡೆಸುತ್ತಾರೆ. ವ್ಯಾಪಾರ, ವೈದ್ಯಕೀಯ ಚಿಕಿತ್ಸೆ, ಶಿಕ್ಷಣ ಮುಂತಾದ ಉದ್ದೇಶಗಳಿಗೆ ಕೇರಳದ ಗಡಿ ಭಾಗದ ಜನರು ಹೆಚ್ಚಾಗಿ ಕರ್ನಾಟಕವನ್ನು ಅವಲಂಬಿಸಿದ್ದಾರೆ.

ಕರ್ನಾಟಕ ಮತ್ತು ಕೇರಳ ಗಡಿಭಾಗವನ್ನು ಹೊಂದಿರುವ ಹಲವೆಡೆ ಪೊಲೀಸರು ಚೆಕ್​ಪೋಸ್ಟ್​ಗಳನ್ನು ಸ್ಥಾಪಿಸಿ ತಪಾಸಣೆ ನಡೆಸುತ್ತಿದ್ದಾರೆ. ಸುಳ್ಯ ತಾಲೂಕು ವ್ಯಾಪ್ತಿಯ ಕಲ್ಲುಗುಂಡಿಯಲ್ಲಿ ಜಿಲ್ಲಾ ಚೆಕ್ ಪೋಸ್ಟ್ ಹಾಕಲಾಗಿದೆ. ಜೊತೆಗೆ ಸಂಪಾಜೆಯಲ್ಲಿ ಅರಣ್ಯ ಚೆಕ್ ಪೋಸ್ಟ್, ಜಾಲ್ಸೂರು ಮತ್ತು ನಾರ್ಕೋಡ್​​ನಲ್ಲಿ ಚೆಕ್ ಪೋಸ್ಟ್ ಸ್ಥಾಪಿಸಿ ತೀವ್ರ ತಪಾಸಣೆ ನಡೆಸಲಾಗುತ್ತಿದೆ. ಜೊತೆಗೆ ತಲಪಾಡಿಯ ದೇವಿಪುರ ರಸ್ತೆ, ಬಂಟ್ವಾಳ, ಸಾರಡ್ಕ, ಆನೆಕಲ್ಲು, ಕನ್ಯಾನ, ಸಾಲೆತ್ತೂರು, ಮೇಡುಗಳಲ್ಲಿ ಚೆಕ್ ಪೋಸ್ಟ್ ಗಳನ್ನು ಸ್ಥಾಪಿಸಿ ಪೊಲೀಸರು ವಾಹನ ತಪಾಸಣೆ ನಡೆಸುತ್ತಿದ್ದಾರೆ.

ಕರ್ನಾಟಕದಲ್ಲಿ ಮೇ 10 ರಂದು ವಿಧಾನಸಭೆ ಚುನಾವಣೆ ನಡೆಯಲಿದೆ. ಈ ಹಿನ್ನೆಲೆ ರಾಜ್ಯಾದ್ಯಂತ ಚುನಾವಣಾ ನೀತಿ ಸಂಹಿತೆ ಜಾರಿಗೊಳಿಸಲಾಗಿದೆ. ಒಂದೇ ಹಂತದಲ್ಲಿ ಮತದಾನ ನಡೆಯಲಿದ್ದು, ಮೇ 13 ರಂದು ಮತ ಎಣಿಕೆ ನಡೆಯಲಿದೆ.

ಇದನ್ನೂ ಓದಿ :ಅಕ್ರಮಗಳ ಮೇಲೆ ಚು.ಆಯೋಗದ ಹದ್ದಿನ ಕಣ್ಣು: ₹39 ಕೋಟಿ ಮೌಲ್ಯದ ನಗದು, ಮದ್ಯ ಜಪ್ತಿ

ABOUT THE AUTHOR

...view details