ನವದೆಹಲಿ: ಕೇಂದ್ರ ಸರ್ಕಾರ ಪೆಗಾಸಸ್ ವಿಚಾರವನ್ನು ಸಂಸತ್ನಲ್ಲಿ ಚರ್ಚಿಸಲು ಯಾಕೆ ಹೆದರುತ್ತಿದೆ ಎಂದು ಕಾಂಗ್ರೆಸ್ ಹಿರಿಯ ಮುಖಂಡ ದಿಗ್ವಿಜಯ್ ಸಿಂಗ್ ಪ್ರಶ್ನಿಸಿದ್ದಾರೆ.
ಈ ಬಗ್ಗೆ ಟ್ವೀಟ್ ಮಾಡಿರುವ ಅವರು, ಪೆಗಾಸಸ್ ಬಗ್ಗೆ ಅಧಿವೇಶನದಲ್ಲಿ ಚರ್ಚಿಸಲು ಮೋದಿ- ಶಾ ಯಾಕೆ ಹೆದರುತ್ತಾರೆ. ಪೆಗಾಸಸ್ ಅನ್ನು ಆಂತರಿಕ ಭದ್ರತೆ, ಮಾದಕ ವಸ್ತು ಸಂಬಂಧಿತ ಅಪರಾಧಗಳಿಗೆ ಬಳಸಿದ್ದರೆ ಸ್ವಾಗತಾರ್ಹ. ಆದರೆ, ಇವರು ಯಾಕೆ ಭಯ ಪಡುತ್ತಿದ್ದಾರೆ ಅನ್ನೋದು ಅರ್ಥವಾಗುತ್ತಿಲ್ಲ ಎಂದು ಉಲ್ಲೇಖಿಸಿದ್ದಾರೆ.
2019 ರಲ್ಲೇ ನಾನು ಪೆಗಾಸಸ್ ವಿಚಾರ ಪ್ರಸ್ತಾಪಸಿದ್ದೆ, ಆಗಿನ ಐಟಿ ಸಚಿವರು ನನ್ನ ಯಾವುದೇ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ. ಇಂದು ಮತ್ತೆ ಈ ವಿಷಯ ಚರ್ಚೆಗೆ ಬಂದಿದ್ದು, ರಾಜ್ಯಸಭೆಗೆ ನೋಟಿಸ್ ನೀಡಿದ್ದೇನೆ. ಮೋದಿ ಮತ್ತು ಅಮಿತ್ ಶಾ ಚರ್ಚೆಗೆ ಒಪ್ಪುತ್ತಾರೆ ಎಂದು ಭಾವಿಸಿದ್ದೇನೆ. ಇದೊಂದು ತುರ್ತು ರಾಷ್ಟ್ರೀಯ ಭದ್ರತೆಯ ವಿಷಯ ಎಂದಿದ್ದಾರೆ.