ಗೋವಾ ಆರೋಗ್ಯ ಸಚಿವ ವಿಶ್ವಜಿತ್ ರಾಣೆ, ರಾಜ್ಯದಲ್ಲಿ ಕೊರೊನಾ ಸೋಂಕು ನಿಯಂತ್ರಣಕ್ಕೆ ತರಲು 18 ವರ್ಷಕ್ಕಿಂತ ಮೇಲ್ಪಟ್ಟ ಎಲ್ಲರಿಗೂ ಐವರ್ಮೆಕ್ಟಿನ್ ಔಷಧಿಯನ್ನು ಶಿಫಾರಸು ಮಾಡಿದ ಬಳಿಕ ವಿಶ್ವ ಆರೋಗ್ಯ ಸಂಸ್ಥೆ ಇದರ ಬಳಕೆಯ ವಿರುದ್ಧ ಎಚ್ಚರಿಕೆ ನೀಡಿದೆ.
"ಯಾವುದೇ ಔಷಧಿಯನ್ನು ಬಳಸುವಾಗ ಸುರಕ್ಷತೆ ಮತ್ತು ಪರಿಣಾಮಕಾರಿತ್ವವು ಮುಖ್ಯವಾಗಿದೆ. ಕ್ಲಿನಿಕಲ್ ಪ್ರಯೋಗಗಳನ್ನು ಹೊರತುಪಡಿಸಿ ಕೊರೊನಾ ನಿಯಂತ್ರಣಕ್ಕಾಗಿ ಐವರ್ಮೆಕ್ಟಿನ್ ಅನ್ನು ಬಳಸುವುದನ್ನು WHO ವಿರೋಧಿಸುತ್ತದೆ" ಎಂದು ಜಾಗತಿಕ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಸೌಮ್ಯ ಸ್ವಾಮಿನಾಥನ್ ಟ್ವೀಟ್ನಲ್ಲಿ ತಿಳಿಸಿದ್ದಾರೆ.
ಈ ಹಿಂದೆ ಸಚಿವ ರಾಣೆ ಅವರು ಸುದ್ದಿಗೋಷ್ಠಿಯಲ್ಲಿ ಮಾತನಾಡಿ, "ಗೋವಾದಲ್ಲಿ 18 ವರ್ಷ ಮೇಲ್ಪಟ್ಟವರು ಕೊರೊನಾ ರೋಗಲಕ್ಷಣ ಇದೆಯೋ ಅಥವಾ ಇಲ್ಲವೇ ಎಂಬುದನ್ನು ಲೆಕ್ಕಿಸದೆ ಎಲ್ಲರು ಐವರ್ಮೆಕ್ಟಿನ್ ಔಷಧಿ ಪಡೆಯಬಹುದು. ಐದು ದಿನಗಳ ಅವಧಿಯವರೆಗೂ ಔಷಧಿಯನ್ನು ನೀಡಲಾಗುತ್ತದೆ. ಈ ಔಷಧಿಯು ಕೊರೊನಾವೈರಸ್ ಸೋಂಕಿತರ ಮರಣ ಪ್ರಮಾಣವನ್ನು ತಗ್ಗಿಸುವುದರ ಜೊತೆಗೆ ಕೊವಿಡ್-19 ಸೋಂಕು ನಿವಾರಿಸುವ ನಿಟ್ಟಿನಲ್ಲಿ ಪರಿಣಾಮಕಾರಿಯಾಗಿದೆ ಎಂದು ಇಂಗ್ಲೆಂಡ್, ಇಟಲಿ, ಸ್ಪೇನ್ ಮತ್ತು ಜಪಾನ್ ರಾಷ್ಟ್ರಗಳ ತಜ್ಞರ ತಂಡ ಅಭಿಪ್ರಾಯಪಟ್ಟಿದೆ" ಎಂದು ಹೇಳಿದ್ದರು.