ಪುರುಲಿಯಾ (ಪಶ್ಚಿಮ ಬಂಗಾಳ):ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ವಿರುದ್ಧ ಬಿಜೆಪಿ ವಾಗ್ದಾಳಿ ಮುಂದುವರೆಸಿದ್ದು, ರಾಜ್ಯದಲ್ಲಿ 'ಗಾಲಿಕುರ್ಚಿ' (ವ್ಹೀಲ್ಚೇರ್) ಸರ್ಕಾರ ಕಾರ್ಯ ನಿರ್ವಹಿಸುವುದಿಲ್ಲ ಎಂದು ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯಾಧ್ಯಕ್ಷ ದಿಲೀಪ್ ಘೋಷ್ ಹೇಳಿದ್ದಾರೆ.
ನಂದಿಗ್ರಾಮ ಪ್ರಚಾರದ ವೇಳೆ ಗಾಯಗೊಂಡ ಬಳಿಕ ಸಿಎಂ ಮಮತಾ ಬ್ಯಾನರ್ಜಿ ಅವರು ಗಾಲಿಕುರ್ಚಿ ಮೂಲಕವೇ ರ‍್ಯಾಲಿಗಳನ್ನು ಮುಂದುವರೆಸಿದ್ದಾರೆ. ಈ ಬಗ್ಗೆ ಪುರುಲಿಯಾದಲ್ಲಿ ನಿನ್ನೆ ಚುನಾವಣಾ ರ‍್ಯಾಲಿಯನ್ನುದ್ದೇಶಿಸಿ ಮಾತನಾಡಿದ ಘೋಷ್, ತಮ್ಮ ವ್ಹೀಲ್ಚೇರ್ ಅನ್ನು ತಳ್ಳಲು ದೀದಿ ಹೇಳುತ್ತಿದ್ದಾರೆ. ಅದರಂತೆ ನಾವು ಅವರ ವ್ಹೀಲ್ಚೇರ್ ಸರ್ಕಾರವನ್ನೂ ತಳ್ಳಬೇಕಾಗಿದೆ, ಬದಲಾವಣೆ ಬೇಕಿದೆ ಎಂದರು.
ಇದನ್ನೂ ಓದಿ: ಇಂದು ಪಶ್ಚಿಮ ಬಂಗಾಳಕ್ಕೆ ರಾಜನಾಥ್ ಸಿಂಗ್ ಭೇಟಿ : ಸಾರ್ವಜನಿಕ ಸಭೆ ನಡೆಸಲಿರುವ ಸಚಿವರು
ಜನರು ಪ್ರಧಾನಿ ನರೇಂದ್ರ ಮೋದಿ ಜೀ ಅವರ ಮುಖವನ್ನು ನೋಡಲೂ ಬಯಸುವುದಿಲ್ಲ ಎಂದು ದೀದಿ ಹೇಳುತ್ತಾರೆ. ಹಾಗಿದ್ರೆ ಈಗ ಹೇಗೆ ಇಷ್ಟೊಂದು ದೊಡ್ಡ ಸಂಖ್ಯೆಯಲ್ಲಿ ಜನರು ರ‍್ಯಾಲಿಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ವಾಸ್ತವವಾಗಿ ಮಮತಾರ ಮುಖವನ್ನು ನೋಡಲು ಜನರು ಬಯಸುವುದಿಲ್ಲ. ಅದಕ್ಕಾಗಿಯೇ ದೀದಿ ಇಂದು ಜನರಿಗೆ ತಮ್ಮ ಮುರಿದ ಕಾಲು ತೋರಿಸುತ್ತಿದ್ದಾರೆ ಎಂದು ದಿಲೀಪ್ ವ್ಯಂಗ್ಯವಾಡಿದ್ದಾರೆ.
ಪಶ್ಚಿಮ ಬಂಗಾಳದಲ್ಲಿ 294 ಕ್ಷೇತ್ರಗಳಿಗೆ ಮಾರ್ಚ್ 27 ರಿಂದ ಏಪ್ರಿಲ್ 29ರ ವರೆಗೆ ಎಂಟು ಹಂತಗಳಲ್ಲಿ ವಿಧಾನಸಭೆ ಚುನಾವಣೆ ನಡೆಯಲಿದ್ದು, ಮೇ 2 ರಂದು ಫಲಿತಾಂಶ ಹೊರಬೀಳಲಿದೆ.