ಗ್ವಾಲಿಯರ್(ಮಧ್ಯಪ್ರದೇಶ):ಮಧ್ಯಪ್ರದೇಶದ ಶಿಯೋಪುರ್ನಲ್ಲಿರುವ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಹೊಸ ಅತಿಥಿಗಳ ಆಗಮನವಾಗಿದೆ. ಬರೋಬ್ಬರಿ 70 ವರ್ಷಗಳ ಬಳಿಕ ವಿದೇಶಿ ಅತಿಥಿಗಳು ಭಾರತದ ನೆಲದಲ್ಲಿ ಹೆಜ್ಜೆ ಇಟ್ಟಿವೆ. ವಿಶೇಷವಾಗಿ ಪ್ರಧಾನಿ ನರೇಂದ್ರ ಮೋದಿ ಅವರ ಹುಟ್ಟುಹಬ್ಬದ ದಿನವೇ ಇವುಗಳ ಆಗಮನವಾಗಿರುವುದು ಸಂಭ್ರಮ ಮತ್ತಷ್ಟು ಇಮ್ಮಡಿಗೊಳಿಸಿದೆ.
ಆಫ್ರಿಕನ್ ಚೀತಾಗಳನ್ನು ಭಾರತಕ್ಕೆ ಕರೆತರಲು 70 ವರ್ಷಗಳಿಂದ ಚಾತಕದ ಪಕ್ಷಿಯಂತೆ ಕಾಯಲಾಗ್ತಿತ್ತು. ಕೊನೆಗೂ ನಮೀಬಿಯಾದಿಂದ ವಿಶೇಷ ಕಾರ್ಗೋ ವಿಮಾನದಲ್ಲಿ ಇವುಗಳ ಆಗಮನವಾಗಿದೆ. ಸೆಪ್ಟೆಂಬರ್ 16 ಆಫ್ರಿಕಾದ ನಮೀಬಿಯಾದಿಂದ ಈ ಚೀತಾಗಳು ಪ್ರಯಾಣ ಬೆಳೆಸಿದ್ದವು. ಇಂದು ಬೆಳಗ್ಗೆ 8 ಗಂಟೆಗೆ ಗ್ವಾಲಿಯರ್ ವಿಮಾನ ನಿಲ್ದಾಣ ತಲುಪಿದ್ದು, ಅಲ್ಲಿಂದ ಮಧ್ಯಪ್ರದೇಶ ಕುನೋ ರಾಷ್ಟ್ರೀಯ ಉದ್ಯಾನವನಕ್ಕೆ ಕರೆತರಲಾಗಿದೆ. ಇದೀಗ ಅಭಯಾರಣ್ಯಕ್ಕೆ ಅವುಗಳನ್ನು ಬಿಡಲಾಗಿದೆ.
70 ವರ್ಷಗಳ ಹಿಂದೆ ಭಾರತದಲ್ಲಿ ಸಾಕಷ್ಟು ಚೀತಾಗಳ ಸಂತತಿ ಇತ್ತು. ಆದರೆ, ದಿನಕಳೆದಂತೆ ಅವುಗಳ ಸಂತತಿ ಕಡಿಮೆಯಾಗಿದ್ದು, ಇದೀಗ ಬರೋಬ್ಬರಿ 7 ದಶಕಗಳ ಬಳಿಕ ಭಾರತಕ್ಕೆ ಆಫ್ರಿಕನ್ ಚೀತಾಗಳು ಮತ್ತೊಮ್ಮೆ ಪ್ರವೇಶ ಪಡೆದುಕೊಳ್ಳಲಿವೆ. 2020ರಲ್ಲಿ ದಕ್ಷಿಣ ಆಫ್ರಿಕಾದ ಚೀತಾ ಪರಿಚಯಿಸಲು ಸುಪ್ರೀಂಕೋರ್ಟ್ ಗ್ರೀನ್ ಸಿಗ್ನಲ್ ನೀಡಿದ್ದು, ಇದೀಗ ಕುನೊ ರಾಷ್ಟ್ರೀಯ ಉದ್ಯಾನವನದಲ್ಲಿ ಚೀತಾಗಳು ಹೆಜ್ಜೆ ಇಟ್ಟಿವೆ. ಈ ವಿಶೇಷ ಚೀತಾಗಳು ಮೂರೇ ನಿಮಿಷದಲ್ಲಿ ತಮ್ಮ ವೇಗವನ್ನು 0 ದಿಂದ 103 km/h (64 mph)ಗೆ ಹೆಚ್ಚಿಸಿಕೊಳ್ಳುವ ಸಾಮರ್ಥ್ಯ ಹೊಂದಿವೆ.
ಭಾರತವು ಈ ವರ್ಷ 20 ಆಫ್ರಿಕನ್ ಚೀತಾಗಳನ್ನು ಸ್ವೀಕರಿಸಬೇಕಿತ್ತು. ಅವುಗಳಲ್ಲಿ 8 ಚೀತಾಗಳು ನಮೀಬಿಯಾದಿಂದ ಆಗಮಿಸಿದ್ದು, ಇನ್ನೂ 12 ಚೀತಾಗಳು ದಕ್ಷಿಣ ಆಫ್ರಿಕಾದಿಂದ ಆಗಮಿಸಬೇಕಾಗಿದೆ. ಯಾವುದೇ ಸೋಂಕಿಗೆ ತುತ್ತಾಗದಂತೆ, ಸೋಂಕು ಹಬ್ಬದಂತೆ ಚೀತಾಗಳಿಗೆ ಲಸಿಕೆ ನೀಡಲಾಗಿತ್ತು. ಈ ಚೀತಾಗಳು ಭಾರತದ ವಾತಾವರಣಕ್ಕೆ ಹೊಂದಿಕೊಳ್ಳಲು ಸ್ವಲ್ಪ ಸಮಯ ಬೇಕಾದ ಕಾರಣ, ಅವುಗಳಿಗೆ ಕುನೋ ನ್ಯಾಷನಲ್ ಪಾರ್ಕ್ನಲ್ಲಿ ಮುಕ್ತವಾಗಿ ವಿಹರಿಸಲು ಅವಕಾಶ ನೀಡಲಾಗುತ್ತದೆ.