ಮದುವೆ ಅನ್ನೋದು ಮನುಷ್ಯನ ಜೀವನದ ಅತ್ಯಂತ ಮಹತ್ವದ ಘಟ್ಟ ಹಾಗೂ ಅವಿಸ್ಮರಣೀಯ ನೆನಪು ಕೂಡ ಹೌದು. ಹೀಗಾಗಿಯೇ ಮದುವೆಯಲ್ಲಿ ಏನಾದರೂ ಹೊಸತನ ಇರಬೇಕೆಂದು ಅನೇಕರು ಯೋಚಿಸುತ್ತಾರೆ. ಅದರಲ್ಲೂ ಪ್ರಮುಖವಾಗಿ ತಮ್ಮ ಮದುವೆ ಇಲ್ಲವೇ ಆರತಕ್ಷತೆಯ ಆಮಂತ್ರಣ ಪತ್ರಿಕೆಯು ವಿಶೇಷತೆಯಿಂದ ಕೂಡಿರಬೇಕೆಂದು ನವ ವಧು-ವರರು ಸಹ ಬಯಸುತ್ತಾರೆ.
ಇಂತಹದ್ದೊಂದು ವಿಶೇಷ ಹಾಗೂ ವಿಭಿನ್ನವಾದ ಆಮಂತ್ರಣ ಪತ್ರಿಕೆ ತಮಿಳುನಾಡಿನ ತಿರುವಣ್ಣಾಮಲೈಯಲ್ಲಿ ಮುದ್ರಣವಾಗಿದೆ. ಇಲ್ಲಿನ ನವ ಜೋಡಿ ವಿವಾಹ ಮತ್ತು ಆರತಕ್ಷತೆ ಆಮಂತ್ರಣಕ್ಕಾಗಿ ಟ್ಯಾಬ್ಲೆಟ್ ಕಾರ್ಡ್ ಮಾದರಿಯನ್ನು ಬಳಸಿದ್ದಾರೆ. ಮತ್ತೊಂದು ವಿಶೇಷವೆಂದರೆ, ಈ ಜೋಡಿ ವೈದ್ಯಕೀಯ ಕ್ಷೇತ್ರಕ್ಕೆ ಸಂಬಂಧಿಸಿರುವವರೇ ಆಗಿದ್ದು, ವಿವಾಹದ ಆಮಂತ್ರಣ ಪತ್ರಿಕೆಯಲ್ಲೂ ತಮ್ಮ ವೃತ್ತಿಪರತೆ ತೋರಿದ್ದಾರೆ.
ಈ ಟ್ಯಾಬ್ಲೆಟ್ ಕಾರ್ಡ್ನಲ್ಲಿ ಏನಿದೆ?: ತಿರುವಣ್ಣಾಮಲೈ ಜಿಲ್ಲೆಯ ಎಜಿಲರಸನ್ ಮತ್ತು ವಿಲ್ಲುಪುರಂ ಜಿಲ್ಲೆಯ ಗೆಂಜಿಯ ವಸಂತಕುಮಾರಿ ಅವರು ಸೆಪ್ಟೆಂಬರ್ 5ರಂದು ತಮ್ಮ ದಾಂಪತ್ಯ ಜೀವನಕ್ಕೆ ಕಾಲಿಡುತ್ತಿದ್ದಾರೆ. ಎಹಿಲರಸನ್ ಫಾರ್ಮಾಸಿಸ್ಟ್ ಆಗಿ ಮತ್ತು ವಸಂತಕುಮಾರಿ ನರ್ಸ್ ಆಗಿ ಕೆಲಸ ಮಾಡುತ್ತಿದ್ದಾರೆ.
ಟ್ಯಾಬ್ಲೆಟ್ ಕಾರ್ಡ್ ಮಾದರಿಯಲ್ಲಿ ಮುದ್ರಿಸುವ ಈ ಆಮಂತ್ರಣ ಪತ್ರಿಕೆಯಲ್ಲಿ ಎಹಿಲರಸನ್ ಮತ್ತು ವಸಂತಕುಮಾರಿ ವೆಡ್ಡಿಂಗ್ ಎಂದು ಮೇಲುಗಡೆ ಮತ್ತ ಕೆಳಗಡೆ ದೊಡ್ಡ ಅಕ್ಷರದಲ್ಲಿದೆ. ಎಡ ಭಾಗದಲ್ಲಿ ಇಬ್ಬರ ಶಿಕ್ಷಣದ ವಿವರಗಳಿದ್ದರೆ, ಬಲಭಾಗದಲ್ಲಿ ನೀಲಿ ಬಣ್ಣದಲ್ಲಿ ಮದುವೆ ದಿನಾಂಕ ಮತ್ತು ಮುಹೂರ್ತ ಹಾಗೂ ಆರತಕ್ಷತೆ ಸಮಯವನ್ನು ಮುದ್ರಿಸಲಾಗಿದೆ. ಮ್ಯಾನುಫ್ಯಾಕ್ಚರ್ ವಿಭಾಗದಲ್ಲಿ ವರನ ತಂದೆ-ತಾಯಿ ಹಾಗೂ ವಧುವಿನ ತಂದೆ-ತಾಯಿ ಹೆಸರಿನೊಂದಿಗೆ ಅವರ ವಿಳಾಸ ಕೂಡ ಇದೆ.
ಟ್ಯಾಬ್ಲೆಟ್ ಕಾರ್ಡ್ಗಳಲ್ಲಿ ವೈದ್ಯರ ಸಲಹೆಯಿಲ್ಲದೆ ಅಥವಾ ಸೂರ್ಯನ ಶಾಖದಲ್ಲಿಟ್ಟು ಸೇವಿಸಬಾರದು ಎಂಬ ವಾರ್ನಿಂಗ್ ಅಥವಾ ಎಚ್ಚರಿಕೆ ಅನ್ನೋದು ಕಡ್ಡಾಯವಾಗಿ ಇರುತ್ತದೆ. ಈ ವಾರ್ನಿಂಗ್ ಸ್ಥಳದಲ್ಲಿ ಎಲ್ಲ ಸ್ನೇಹಿತರೇ ಮತ್ತು ಬಂಧುಗಳೇ ನಮ್ಮ ವಿವಾಹ ಸಮಾರಂಭವನ್ನು ಮಿಸ್ ಮಾಡಬೇಡಿ ಎಂದು ಕೆಂಪು ಅಕ್ಷರದಲ್ಲಿ ಹಾಕಿಸಿದ್ದಾರೆ. ಮತ್ತೊಂದು ವಿಶೇಷವೆಂದರೆ ಈ ಆಮಂತ್ರಣ ಕಾರ್ಡ್ನಲ್ಲಿ ಮದುವೆಯ ದಿನದ ವಿಶೇಷ ದಿನಗಳನ್ನೂ ಸ್ಮರಿಸಲಾಗಿದೆ. ಅಂದು ಶಿಕ್ಷಕರ ದಿನ ಹಾಗೂ ಮದರ್ ತೆರೇಸಾ ಸ್ಮರಣೆ ದಿನವಿದೆ ಎಂದೂ ಮುದ್ರಿಸಲಾಗಿದೆ.
ಇದನ್ನೂ ಓದಿ:ಅ.23 ರಂದು ಅಯೋಧ್ಯೆ ದೀಪೋತ್ಸವ: ಗಿನ್ನೆಸ್ ದಾಖಲೆಗಾಗಿ ಬೆಳಗಲಿವೆ 14.50 ಲಕ್ಷ ಹಣತೆ