ನವದೆಹಲಿ:ದೆಹಲಿ ಮೆಟ್ರೋ ರೈಲಿನಲ್ಲಿ ನೃತ್ಯ, ಕೆಲವೊಮ್ಮೆ ಹೊಡೆದಾಟ ಮತ್ತೂ ಕೆಲವೊಮ್ಮೆ ಪ್ರಣಯದ ವಿಡಿಯೋಗಳು ಈ ಹಿಂದೆ ವೈರಲ್ ಆಗಿದ್ದವು. ಇದೀಗ ಹೊಸ ವಿಡಿಯೋ ಕ್ಲಿಪ್ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ವ್ಯಕ್ತಿಯೊಬ್ಬರು ಮೆಟ್ರೋ ಕೋಚ್‌ನೊಳಗೆ ಕುಳಿತು ಬೀಡಿ ಸೇದುತ್ತಿರುವ ವಿಡಿಯೋ ಇದಾಗಿದೆ. ಹಿರಿಯ ನಾಗರಿಕರಿಗಾಗಿ ಮೀಸಲಿಟ್ಟ ಆಸನದ ಮೇಲೆ ಕುಳಿತ ವ್ಯಕ್ತಿ ತನ್ನ ಜೇಬಿನಿಂದ ಬೀಡಿ ಮತ್ತು ಬೆಂಕಿ ಪೊಟ್ಟಣ ತೆಗೆದು ಬೆಂಕಿ ಹಚ್ಚಿ ಬೀಡಿ ಸೇದಲು ಶುರುವಿಟ್ಟುಕೊಂಡರು. ಸೇದಿದ ನಂತರ ಬೀಡಿಯ ತುಂಡನ್ನು ರೈಲಿನೊಳಗೇ ಎಸೆದಿರುವುದನ್ನು ಕಾಣಬಹುದು.
ಚಲಿಸುತ್ತಿದ್ದ ಮೆಟ್ರೋದಲ್ಲಿ ಘಟನೆ ನಡೆದಿದೆ. ಪಕ್ಕದಲ್ಲಿ ಕುಳಿತ ವ್ಯಕ್ತಿ ಎದ್ದು ಹೊರಹೋಗುತ್ತಾರೆ. ಆದರೆ, ಆರಂಭದಲ್ಲಿ ಯಾರೂ ಆತನನ್ನು ತಡೆಯುವ ಪ್ರಯತ್ನ ಮಾಡಲಿಲ್ಲ. ಸಹಪ್ರಯಾಣಿಕರೊಬ್ಬರು ಬೀಡಿಯ ಕಡೆಗೆ ಕೈ ತೋರಿಸಿ ಮಾತನಾಡುತ್ತಿರುವುದು ವಿಡಿಯೋದಲ್ಲಿದೆ. ಮೆಟ್ರೋ ಕೋಚ್‌ನೊಳಗೆ ಧೂಮಪಾನ ನಿಷೇಧವಿದ್ದರೂ ನಿಯಮ ಉಲ್ಲಂಘಿಸಿ, ಸುಮ್ಮನೆ ಕುಳಿತು ಬೀಡಿ ಸೇದುತ್ತಿದ್ದರು. ಈ ಘಟನೆ ಯಾವಾಗ ನಡೆದಿದೆ ಎಂಬುದರ ಕುರಿತು ಸ್ಪಷ್ಟ ಮಾಹಿತಿ ಲಭ್ಯವಾಗಿಲ್ಲ.
''ಮೆಟ್ರೋ ಆವರಣದೊಳಗೆ ಧೂಮಪಾನವನ್ನು ಕಟ್ಟುನಿಟ್ಟಾಗಿ ನಿಷೇಧಿಸಲಾಗಿದೆ ಮತ್ತು ಇದು ಶಿಕ್ಷಾರ್ಹ ಅಪರಾಧ'' ಎಂಬ ಘೋಷಣೆಯಿರುವ ಪೋಸ್ಟರ್ಗಳನ್ನು ರೈಲು ನಿಲ್ದಾಣ ಮತ್ತು ರೈಲು ಕೋಚ್‌ನ ಅಲ್ಲಲ್ಲಿ ಅಂಟಿಸಲಾಗಿದೆ. ಮೆಟ್ರೋದಲ್ಲಿ ಯಾವುದೇ ಪ್ರಯಾಣಿಕರು ಅನುಚಿತವಾಗಿ ವರ್ತಿಸದಂತೆಯೂ ಡಿಎಂಆರ್‌ಸಿ ಸೂಚನೆ ನೀಡಿದೆ. ಒಂದು ವೇಳೆ ಕೆಟ್ಟ ವರ್ತನೆ ಕಂಡುಬಂದರೆ ಪ್ರಯಾಣಿಕರು ತಕ್ಷಣವೇ ಮೆಟ್ರೋ ಪೊಲೀಸರಿಗೆ ವಿಷಯ ತಿಳಿಸಬೇಕು. ಪೊಲೀಸರು ಕಾನೂನಿನ ಪ್ರಕಾರ ಕ್ರಮ ತೆಗೆದುಕೊಳ್ಳುತ್ತಾರೆ ಎಂದು ಮಾಹಿತಿ ನೀಡಿದೆ.