ವಿದೇಶಕ್ಕೆ ಹಾರಲು ರೆಡಿಯಾದ ವಾರಾಣಸಿ ಬೀದಿನಾಯಿ ಜಯಾ. ವಾರಾಣಸಿ (ಉತ್ತರ ಪ್ರದೇಶ): ಯಾರಿಗುಂಟು ಯಾರಿಗಿಲ್ಲ ಹೇಳಿ, ವಾರಾಣಸಿಯ ಹೆಣ್ಣು ಬೀದಿನಾಯಿಯೊಂದು ವಿದೇಶಕ್ಕೆ ಹಾರಲು ಸಿದ್ಧವಾಗಿದೆ. ಕೇಳುವವರೇ ಇಲ್ಲದೇ ಇದ್ದ ಬೀದಿನಾಯಿ ಜಯಾ ಇದೀಗ ವಿಮಾನವೇರಲು ತಯಾರಾಗಿದ್ದು, ಪಾಸ್ಪೋರ್ಟ್ ಹಾಗೂ ವೀಸಾ ಕೂಡ ರೆಡಿಯಾಗಿದೆ.
ಹೇಗೆ ಅಂತೀರಾ.. ನೆದರ್ಲ್ಯಾಂಡ್ನಿಂದ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ಮೆರಲ್ ಬೊಂಟೆನ್ಬೆಲ್ ಬೀದಿನಾಯಿ ಜಯಾಳನ್ನು ನೋಡಿದ್ದ ಮೊದಲ ಬಾರಿಯೇ ಅವಳ ಮೇಲೆ ಪ್ರೀತಿಯಾಗಿ ಈಗ ತಮ್ಮೂರಿಗೆ ಕರೆದೊಯ್ಯುತ್ತಿದ್ದಾರೆ. ಆರು ತಿಂಗಳ ಸತತ ಪ್ರಯತ್ನದಿಂದ ಜಯಾಳನ್ನು ತಮ್ಮ ಮನೆಯ ಸದಸ್ಯರಲ್ಲಿ ಒಬ್ಬರನ್ನಾಗಿ ಮಾಡಿಕೊಂಡಿದ್ದಾರೆ. ನಾಯಿಯನ್ನು ದತ್ತು ಪಡೆದಿರುವ ಅಮ್ಸ್ಟರ್ಡ್ಯಾಂನ ನಿವಾಸಿ ಮೆರಲ್ ಬೊಂಟೆನ್ಬೆಲ್ ಜಯಾಳ ಮೇಲಿನ ಪ್ರೀತಿಯಿಂದ ಈ ನಿರ್ಧಾರ ಕೈಗೊಂಡಿದ್ದಾರೆ.
ಈ ಬಗ್ಗೆ ಮಾಧ್ಯಮಗಳ ಜೊತೆಗೆ ಮಾತನಾಡಿದ ಅವರು, "ಮನೆಗೆ ಸಾಕುಪ್ರಾಣಿಯನ್ನು ತರಬೇಕು ಎಂದು ತುಂಬಾ ಸಮಯದಿಂದ ಅಂದುಕೊಳ್ಳುತ್ತಿದ್ದೆ. ಭಾರತಕ್ಕೆ ಭೇಟಿ ನೀಡಿದಾಗ, ದೇವಾಲಯಗಳ ನಗರ ವಾರಾಣಸಿಗೆ ಬಂದಾಗ ಬೀದಿನಾಯಿಯೊಂದು ಬಹಳ ಇಷ್ಟವಾಯಿತು. ಈಗ ಅದನ್ನು ದತ್ತು ಪಡೆದು, ನನ್ನ ಮನೆಗೆ ಕರೆದುಕೊಂಡು ಹೋಗುತ್ತಿದ್ದೇನೆ" ಎಂದು ಹೇಳಿದರು.
"ವಾರಾಣಸಿ ನಗರವನ್ನು ಅನ್ವೇಷಣೆ ಮಾಡುವ ಉದ್ದೇಶದಿಂದ ವಾರಣಸಿಗೆ ಹೋಗಿದ್ದೆ. ಅಲ್ಲಿ ಒಂದು ದಿನ ನನ್ನ ಸಹ ಪ್ರಯಾಣಿಕರ ಜೊತೆಗೆ ಸುಮ್ಮನೆ ಸುತ್ತಾಡುತ್ತಿದ್ದಾಗ ಬೀದಿನಾಯಿ ಜಯಾ ನಮ್ಮ ಬಳಿ ಬಂದಿದ್ದಳು. ಅವಳು ತುಂಬಾ ಮುದ್ದಾಗಿದ್ದಳು. ನನಗಂತೂ ತುಂಬಾ ಇಷ್ಟವಾಗಿ ಹೋಯ್ತು. ಅದನ್ನು ಸ್ವಲ್ಪ ಹೊತ್ತು ಮುದ್ದಾಡಿದೆ. ನಂತರ ನಾವು ಹೋದಲ್ಲೆಲ್ಲ ಅವಳು ನಮ್ಮನ್ನು ಹಿಂಬಾಲಿಸಲು ಶುರು ಮಾಡಿದ್ದಳು. ಇನ್ನೊಂದು ದಿನ ನೋಡುವಾಗ ಬೀದಿಯಲ್ಲಿ ಬೇರೆ ನಾಯಿಗಳು ಅವಳ ಮೇಲೆ ದಾಳಿ ಮಾಡುತ್ತಿದ್ದವು. ಅಲ್ಲಿದ್ದ ಸೆಕ್ಯುರಿಟಿ ಗಾರ್ಡ್ ಉಳಿದ ನಾಯಿಗಳಿಂದ ಅವಳನ್ನು ರಕ್ಷಣೆ ಮಾಡಿದ್ದರು" ಎಂದು ಜಯಾ ಅವರಿಗೆ ಪರಿಚಯವಾದ ಬಗೆಯನ್ನು ನೆನಪಿಸಿಕೊಂಡರು.
"ಆರಂಭದಲ್ಲಿ ನಾನು ಅವಳನ್ನು ದತ್ತು ಪಡೆಯಬೇಕು ಎಂದು ಯೋಚಿಸಿರಲಿಲ್ಲ. ಆ ಬೀದಿ ನಾಯಿಗಳಿಂದ ಹಾಗೂ ಆ ಬೀದಿಯಿಂದ ಅವಳನ್ನು ಕಾಪಾಡಬೇಕು ಎಂದುಕೊಂಡಿದ್ದೆ ಅಷ್ಟೆ. ಆದರೆ, ನಂತರದಲ್ಲಿ ಆಕೆಯನ್ನು ದತ್ತು ಪಡೆಯುವ ಯೋಚನೆ ಮಾಡಿದೆ. ನನಗೆ ತುಂಬಾ ಇಷ್ಟವಾದ ಜಯಾಗೆ ಪಾಸ್ಪೋರ್ಟ್ ಹಾಗೂ ವೀಸಾ ವ್ಯವಸ್ಥೆ ಮಾಡಲು ಭಾರತದಲ್ಲಿ ನನ್ನ ವಾಸ್ತವ್ಯವನ್ನು ಆರು ತಿಂಗಳವರೆಗೆ ವಿಸ್ತರಿಸಬೇಕಾಗಿತ್ತು."
"ಇದೀಗ ಅಂತಿಮವಾಗಿ ಅವಳನ್ನು ನನ್ನೊಂದಿಗೆ ಕರೆದೊಯ್ಯಲು ನನಗೆ ನಿಜವಾಗಿಯೂ ಸಂತೋಷವಾಗುತ್ತಿದೆ. ಇದೆಲ್ಲಾ ನೆರವೇರಲು ತುಂಬಾ ಸಮಯ ಬೇಕಾಯಿತು. ಇದು ದೀರ್ಘಾವಧಿಯ ಪ್ರಕ್ರಿಯೆ. ಅವಳನ್ನು ನನ್ನೊಂದಿಗೆ ಕರೆದುಕೊಂಡು ಹೋಗಲು ನಾನು ಆರು ತಿಂಗಳು ಕಾಯಬೇಕಾಯಿತು." ಎಂದು ತಿಳಿಸಿದರು.
ಇದನ್ನೂ ಓದಿ :ಬಾವಿಗೆ ಬಿದ್ದು ಒದ್ದಾಡುತ್ತಿದ್ದ ಬೀದಿನಾಯಿ ರಕ್ಷಿಸಿದ ಯುವಕ- ವಿಡಿಯೋ