ನ್ಯೂ ಜಲಪೈಗುರಿ (ಪಶ್ಚಿಮ ಬಂಗಾಳ):ಪಶ್ಚಿಮ ಬಂಗಾಳದಲ್ಲಿ ಹೊಸದಾಗಿ ಆರಂಭಿಸಲಾದ ವಂದೇ ಭಾರತ್ ಸೆಮಿ ಹೈಸ್ಪೀಡ್ ರೈಲಿನ ಮೇಲೆ ಒಂದೇ ದಿನದ ಅವಧಿಯಲ್ಲಿ ಎರಡನೇ ಬಾರಿಗೆ ಕಲ್ಲು ತೂರಾಟ ನಡೆದಿದೆ. ಇದರಿಂದ 2 ಕಿಟಕಿಯ ಗಾಜುಗಳು ಒಡೆದಿವೆ. ನಿನ್ನೆ ರೈಲು ಜಲಪೈಗುರಿಯಿಂದ ಹೌರಾಕ್ಕೆ ಹೋಗುತ್ತಿದ್ದಾಗ ದಾಳಿ ನಡೆದು, ಬಾಗಿಲಿನ ಮುಂಭಾಗದ ಗಾಜು ಜಖಂಗೊಂಡಿತ್ತು. ಇಂದು ಹೌರಾದಿಂದ ಜಲಪೈಗುರಿಗೆ ಹೋಗುತ್ತಿದ್ದಾಗ ಕಿಡಿಗೇಡಿಗಳು ಮತ್ತದೇ ದುಷ್ಕೃತ್ಯ ಎಸಗಿದ್ದಾರೆ.
ಡಿಸೆಂಬರ್ 30ರಂದು ಪ್ರಧಾನಿ ನರೇಂದ್ರ ಮೋದಿ ಅವರು ಹೌರಾದಿಂದ ನ್ಯೂ ಜಲಫೈಗುರಿಗೆ ಸಂಪರ್ಕ ಕಲ್ಪಿಸುವ ರೈಲಿಗೆ ಚಾಲನೆ ನೀಡಿದ್ದರು. ಕಾರ್ಯಾರಂಭಗೊಂಡ 5 ದಿನದಲ್ಲೇ 2 ಬಾರಿ ಕಲ್ಲಿನ ದಾಳಿಗೆ ಒಳಗಾಗಿದೆ. ಡಾರ್ಜಿಲಿಂಗ್ ಜಿಲ್ಲೆಯ ಫನ್‌ಸಿಡೆವಾ ಪ್ರದೇಶದಲ್ಲಿ ರೈಲು ತೆರಳುತ್ತಿದ್ದಾಗ ನಡೆದ ಕಲ್ಲಿನ ತೂರಾಟದಲ್ಲಿ ಎರಡು ಕಿಟಕಿಯ ಗಾಜುಗಳು ಹಾನಿಗೊಳಗಾಗಿವೆ ಎಂದು ರೈಲ್ವೆ ಇಲಾಖೆ ತಿಳಿಸಿದೆ.
ನಿನ್ನೆ ಸಂಜೆ 5.57 ರ ಸುಮಾರಿಗೆ ರೈಲು ಸಂಖ್ಯೆ 22302 ವಂದೇ ಭಾರತ್ ಎಕ್ಸ್‌ಪ್ರೆಸ್ ಹೌರಾದಿಂದ ಜಲಪೈಗುರಿಗೆ ಪ್ರಯಾಣ ಬೆಳೆಸಿತ್ತು. ಜಲಪೈಗುರಿಗೆ ರೈಲು ಬಂದಾಗ ಪರಿಶೀಲನೆ ನಡೆಸಿದಾಗ ಕಲ್ಲು ತೂರಾಟ ನಡೆಸಿರುವುದು ತಿಳಿದುಬಂದಿದೆ. ಕೋಚ್ ನಂ. C-3 ಮತ್ತು C-6 ರ ಕಿಟಕಿಯ ಗಾಜು ಒಡೆದು ಹೋಗಿವೆ. ಡಾರ್ಜಿಲಿಂಗ್ ಜಿಲ್ಲೆಯ ಫನ್‌ಸಿಡೆವಾ ಪ್ರದೇಶದಲ್ಲಿ ಕಲ್ಲು ತೂರಾಟವಾಗಿದ್ದನ್ನು ರೈಲ್ವೇ ಪೊಲೀಸರು ಗುರುತಿಸಿ ಮಾಹಿತಿ ನೀಡಿದ್ದರು. ಇದಕ್ಕೂ ಮೊದಲು ಸಿ-3 ಮತ್ತು ಸಿ-6 ಕೋಚ್‌ಗಳ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿತ್ತು. ಎರಡೂ ಘಟನೆಯಲ್ಲಿ ಪ್ರಯಾಣಿಕರಿಗೆ ಯಾವುದೇ ಸಮಸ್ಯೆಯಾಗಿಲ್ಲ. ಎರಡು ಪ್ರತ್ಯೇಕ ದೂರು ದಾಖಲಿಸಿಕೊಳ್ಳಲಾಗಿದೆ ಎಂದು ರೈಲ್ವೇ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮೊದಲ ಕಲ್ಲು ತೂರಾಟದ ಘಟನೆ:ಹೌರಾದಿಂದ ನ್ಯೂ ಜಲಫೈಗುರಿಗೆ ಸಂಪರ್ಕ ನೀಡುವ ರೈಲು ಕಥಿಯಾ ವಿಭಾಗದ ಸಾಮ್ಸಿ ಕುಮಾರ್‌ಗಂಜ್ ಬಳಿ ತೆರಳುತ್ತಿದ್ದಾಗ ಕಿಡಿಗೇಡಿಗಳು ಕಲ್ಲೆಸೆದಿದ್ದರು. ಇದರಿಂದ 2 ಬೋಗಿಯ ಬಾಗಿಲು ಮತ್ತು ಕಿಟಕಿಗಳಿಗೆ ಹಾನಿಯಾಗಿತ್ತು. ಘಟನೆಯ ಬಳಿಕ ರೈಲಿನಲ್ಲಿದ್ದ ಪ್ರಯಾಣಿಕರು ಸುರಕ್ಷಿತವಾಗಿದ್ದಾರೆ ಎಂದು ಇಲಾಖೆ ತಿಳಿಸಿತ್ತು. ಜಲಪೈಗುರಿಯಿಂದ ಹೌರಾಗೆ ತೆರಳುತ್ತಿದ್ದಾಗ ಕಿಡಿಗೇಡಿಗಳು ಕಲ್ಲಿ ದಾಳಿ ನಡೆಸಿದ್ದರು. ರೈಲಿನ ಸಿ-13 ಬೋಗಿಗೆ ಕಲ್ಲೇಟುಗಳು ಬಿದ್ದಿದ್ದವು. ಪ್ರಯಾಣಿಕರಿಗೆ ಯಾವುದೇ ತೊಂದರೆ ಉಂಟಾಗಿರಲಿಲ್ಲ. ಪ್ರಕರಣ ದಾಖಲಿಸಿಕೊಂಡಿದ್ದ ರೈಲ್ವೆ ಇಲಾಖೆ ಪೊಲೀಸರು ಆರೋಪಿಗಳ ಪತ್ತೆಗೆ ತನಿಖೆ ಆರಂಭಿಸಿದ್ದರು. ಇದರ ಬೆನ್ನಲ್ಲೇ ಮತ್ತೊಮ್ಮೆ ಕಲ್ಲೆಸೆಯಲಾಗಿದೆ.