ಕರ್ನಾಟಕ

karnataka

ETV Bharat / bharat

ಸುರಂಗ ಕುಸಿತ: ಕಾರ್ಮಿಕರ ತಲುಪಲು 17 ಮೀಟರ್ ಬಾಕಿ, 41 ಹಾಸಿಗೆಯ ಆಸ್ಪತ್ರೆ, ಸ್ಥಳದಲ್ಲಿ 30 ಆಂಬ್ಯುಲೆನ್ಸ್​ ಸನ್ನದ್ಧ - ಸಿಲ್ಕ್ಯಾರಾ ಸುರಂಗ

ಉತ್ತರಕಾಶಿ ಸುರಂಗದಲ್ಲಿ ಸಿಲುಕಿರುವ ಕಾರ್ಮಿಕರನ್ನು ತಲುಪಲು ಇನ್ನೂ 17 ಮೀಟರ್​ ಉದ್ಧ ರಂಧ್ರ ಕೊರೆಯಬೇಕಿದೆ. ದೊಡ್ಡ ಪೈಪ್​ಗಳನ್ನು ಅಳವಡಿಸಿ ಅದರೊಳಗಿನಿಂದ ಹೊರತರುವ ಪ್ರಯತ್ನ ಸಾಗಿದೆ.

ಸುರಂಗ ಕುಸಿತ
ಸುರಂಗ ಕುಸಿತ

By ETV Bharat Karnataka Team

Published : Nov 22, 2023, 10:46 PM IST

ಉತ್ತರಕಾಶಿ (ಉತ್ತರಾಖಂಡ) :ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಕಳೆದ 11 ದಿನಗಳಿಂದ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆ ಸಮರೋಪಾದಿಯಲ್ಲಿ ನಡೆಯುತ್ತಿದೆ. ಕುಸಿತ ಉಂಟಾದ ಸ್ಥಳದಲ್ಲಿ ಸಂಗ್ರಹವಾದ ಬಂಡೆ, ಮಣ್ಣನ್ನು ಅಮೆರಿಕದ ಆಗರ್ ಯಂತ್ರದಿಂದ ಕೊರೆಯಲಾಗುತ್ತಿದೆ. ಮಂಗಳವಾರ ಮಧ್ಯಾಹ್ನದ ವೇಳೆಗೆ 45 ಮೀಟರ್‌ಗಳಷ್ಟು ಉದ್ದ ಕೊರೆಯಲಾಗಿದೆ. 800 ಎಂಎಂನ 8 ಪೈಪ್​ಗಳನ್ನೂ ಅಳವಡಿಸಲಾಗಿದೆ.

ಒಳಗೆ ಸಿಕ್ಕಿಬಿದ್ದ 41 ಕಾರ್ಮಿಕರನ್ನು ತಲುಪಿದ ಬಳಿಕ ಅವರಿಗೆ ತಕ್ಷಣಕ್ಕೆ ವೈದ್ಯಕೀಯ ನೆರವು ನೀಡಲು ಸ್ಥಳದಲ್ಲೇ ಅತ್ಯಾಧುನಿಕ 30 ಆಂಬ್ಯುಲೆನ್ಸ್​ಗಳನ್ನು ವ್ಯವಸ್ಥೆ ಮಾಡಲಾಗಿದೆ. ಅಲ್ಲದೇ, ಉತ್ತರಕಾಶಿಯ ಚಿನ್ಯಾಲಿಸೌರ್‌ನಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ಆಸ್ಪತ್ರೆಯನ್ನೂ ಸಿದ್ಧಪಡಿಸಲಾಗಿದೆ.

ಸಿಕ್ಕಿಬಿದ್ದ ಕಾರ್ಮಿಕರು ತೆವಳಿಕೊಂಡು ಬರಲು ತಲಾ 6 ಮೀಟರ್ ಉದ್ದದ 800 ಎಂಎಂ ವ್ಯಾಸದ ಎರಡು ಉಕ್ಕಿನ ಪೈಪ್‌ಗಳನ್ನು ಅಳವಡಿಸಲು ಸುಮಾರು 12 ಮೀಟರ್‌ಗಳಷ್ಟು ಅಗಲ ಕೊರೆಯುವ ಕೆಲಸವೂ ಸಾಗಿದೆ. ರಾಷ್ಟ್ರೀಯ ವಿಪತ್ತು ನಿರ್ವಹಣಾ ತಂಡದ(ಎನ್​ಡಿಆರ್​ಎಫ್​) ಸದಸ್ಯರು, ರಾಜ್ಯ ವಿಪತ್ತು ನಿರ್ವಹಣಾ ತಂಡದ ಜೊತೆ ಸೇರಿ ರಕ್ಷಣಾ ಕಾರ್ಯದಲ್ಲಿ ತೊಡಗಿದೆ.

ಉತ್ತರಾಖಂಡ ಮುಖ್ಯಮಂತ್ರಿ ಪುಷ್ಕರ್ ಸಿಂಗ್ ಧಾಮಿ ಅವರು ರಕ್ಷಣಾ ಕಾರ್ಯಾಚರಣೆಯ ಸ್ಥಳ ಪರಿಶೀಲನೆ ನಡೆಸಿದರು. ಘಟನಾ ಸ್ಥಳದಲ್ಲಿ 15 ವೈದ್ಯರ ತಂಡವನ್ನೂ ನಿಯೋಜಿಸಲಾಗಿದೆ. ಆಂಬ್ಯುಲೆನ್ಸ್‌ಗಳು ಮತ್ತು ಹೆಲಿಕಾಪ್ಟರ್ ಅನ್ನು ಸ್ಟ್ಯಾಂಡ್‌ಬೈನಲ್ಲಿ ಇರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದರು.

ಕಾರ್ಮಿಕರ ತಲುಪಲು 17 ಮೀಟರ್ ಬಾಕಿ:ಒಳಗಿರುವ ಕಾರ್ಮಿಕರನ್ನು ತಲುಪಲು ಒಟ್ಟು 62 ಮೀಟರ್​ವರೆಗೆ ಕೊರೆಯಬೇಕು. ಇಲ್ಲಿಯವರೆಗೆ 45 ಮೀಟರ್​ ಉದ್ದ ಕೊರೆಯುವ ಕೆಲಸವಾಗಿದೆ. ಅಂದರೆ ಇನ್ನೂ 17 ಮೀಟರ್ ಬಾಕಿ ಉಳಿದಿದೆ. ಸುರಂಗದ ಒಳಗೆ ಇನ್ನೂ ಎರಡು ಪೈಪ್‌ಗಳನ್ನು ಹಾಕಬೇಕಿದೆ. ತಡರಾತ್ರಿಯೊಳಗೆ ಈ ಕಾಮಗಾರಿ ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಕೊರೆಯುವಿಕೆಯು ಅಡಚಣೆಯಿಲ್ಲದೇ ಸಾಗಿದೆ. ಎಲ್ಲವೂ ಸುಸೂತ್ರವಾಗಿ ನಡೆದರೆ ಗುರುವಾರ ಬೆಳಗ್ಗೆಯೇ ಕಾರ್ಮಿಕರನ್ನು ತಲುಪುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ತಿಳಿಸಿದರು.

ಸುರಂಗದಲ್ಲಿರುವ ಕಾರ್ಮಿಕರಿದ್ದಲ್ಲಿಗೆ ಕ್ಯಾಮರಾ ಕಳುಹಿಸಲಾಗಿತ್ತು. ಮೊದಲ ದೃಶ್ಯಗಳು ಸಿಕ್ಕಿದ್ದವು. ಇದೀಗ ಆಡಿಯೊ ಸಂವಹನ ವ್ಯವಸ್ಥೆ ಕೂಡ ಸಿದ್ಧಪಡಿಸಲಾಗಿದೆ. ಇದರಿಂದ ಎಲ್ಲ ಕಾರ್ಮಿಕರನ್ನು ವೈದ್ಯರಿಂದ ಸಮಾಲೋಚನೆ ನಡೆಸಲಾಗುತ್ತಿದೆ. ಮನೋವೈದ್ಯರು ಕೂಡ ಸ್ಥಳದಲ್ಲಿ ಉಪಸ್ಥಿತರಿದ್ದಾರೆ. ಕಾರ್ಮಿಕರ ಮಾನಸಿಕ ಆರೋಗ್ಯವನ್ನು ಪರಿಗಣಿಸಿ ನೆರವು ನೀಡಲಾಗುತ್ತಿದೆ.

ಇದನ್ನೂ ಓದಿ:ಉತ್ತರಕಾಶಿ ಸುರಂಗ ಕುಸಿತ: 11ನೇ ದಿನದ ರಕ್ಷಣಾ ಕಾರ್ಯಾಚರಣೆ; ಹೊಸ ರಸ್ತೆ ನಿರ್ಮಾಣ, ಆಂಬ್ಯುಲೆನ್ಸ್‌ಗಳು ರೆಡಿ

ABOUT THE AUTHOR

...view details