ಉತ್ತರಕಾಶಿ(ಉತ್ತರಾಖಂಡ):ಇಲ್ಲಿನ ಸಿಲ್ಕ್ಯಾರಾ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರಿಗಾಗಿ ನಡೆಯುತ್ತಿರುವ ರಕ್ಷಣಾ ಕಾರ್ಯಾಚರಣೆ ಮತ್ತಷ್ಟು ವೇಗದಿಂದ ಸಾಗಿದ್ದು, ಅಲ್ಲಿ ಸಿಲುಕಿರುವ ಕಾರ್ಮಿಕರು ಸುರಂಗದಿಂದ ಹೊರಬರಲು ಕ್ಷಣಗಣನೆ ಆರಂಭವಾಗಿದೆ. 'ರಾಟ್ ಹೋಲ್ ಗಣಿಗಾರರ' ಗುಂಪು (ಕಲ್ಲಿದ್ದಲು ಗಣಿಗಳಲ್ಲಿ ಕಿರಿದಾದ ಹಾದಿಗಳನ್ನು ಅಗೆಯುವ ತಜ್ಞರು) ನೆಲಕ್ಕೆ ಸಮನಾಂತರವಾಗಿ ನಿಂತುಹೋದ ಸ್ಥಳದಲ್ಲಿ ಲಘು ಉತ್ಖನನ ನಡೆಸುತ್ತಿದೆ. ಹೀಗಾಗಿ, ಯಾವುದೇ ಕ್ಷಣದಲ್ಲೂ ಸಂತ್ರಸ್ತರನ್ನು ಹೊರತರುವ ಸಾಧ್ಯತೆಗಳಿವೆ. ಈಗಾಗಲೇ ಕಾರ್ಮಿಕರ ಕುಟುಂಬಗಳಿಗೆ ಈ ಕುರಿತು ಮಾಹಿತಿ ನೀಡಲಾಗಿದೆ.
ಉತ್ಖನನ ಕಾರ್ಯ ನಡೆಯುತ್ತಿದೆ. ಇನ್ನೂ 2-3 ಮೀಟರ್ ಕೊರೆಯಬೇಕಿದೆ. ಇಂದು ಸಂಜೆ 5 ಗಂಟೆಯೊಳಗೆ ಕಾರ್ಮಿಕರು ಹೊರಬರುವ ನಿರೀಕ್ಷೆ ಇದೆ ಎಂದು ಸೂಕ್ಷ್ಮ ಸುರಂಗ ತಜ್ಞ ಕ್ರಿಸ್ ಕೂಪರ್ ಮಾಧ್ಯಮ ಪ್ರತಿನಿಧಿಗಳಿಗೆ ಹೇಳಿದರು. ಮತ್ತೊಂದೆಡೆ, ಮ್ಯಾನ್ಯುವಲ್ ಡ್ರಿಲ್ಲಿಂಗ್ ಕಡೆಗೆ ಸಂಪೂರ್ಣ ಗಮನಹರಿಸಲು ಬೆಟ್ಟದ ತುದಿಯಿಂದ ಕೊರೆಯುವ ಕೆಲಸವನ್ನು ಸದ್ಯಕ್ಕೆ ನಿಲ್ಲಿಸಲಾಗಿದೆ ಎಂದು ತಿಳಿಸಿದರು.
ಇತ್ತೀಚಿನ ಪರಿಸ್ಥಿತಿಯ ಬಗ್ಗೆ ಅಧಿಕಾರಿಗಳು ಈಗಾಗಲೇ ಕಾರ್ಮಿಕರ ಕುಟುಂಬಗಳಿಗೆ ಮಾಹಿತಿ ಮುಟ್ಟಿಸಿದ್ದಾರೆ. ಅವರ ಬಟ್ಟೆ ಮತ್ತು ಇತರ ವಸ್ತುಗಳು ಹಾಗು ಬ್ಯಾಗ್‌ಗಳೊಂದಿಗೆ ಸಿದ್ಧರಾಗಿರಿ ಎಂದು ಕುಟುಂಬ ಸದಸ್ಯರಿಗೆ ಹೇಳಿದ್ದಾರೆ. ಸುರಂಗದಿಂದ ಕಾರ್ಮಿಕರನ್ನು ಹೊರತರಲು ಎನ್‌ಡಿಆರ್‌ಎಫ್ ಸಿಬ್ಬಂದಿ ಈಗಾಗಲೇ ಅಣಕು ಡ್ರಿಲ್ ನಡೆಸಿದ್ದಾರೆ. ಹೊರಬಂದ ತಕ್ಷಣ ಅವರಿಗೆ ವೈದ್ಯಕೀಯ ಚಿಕಿತ್ಸೆ ನೀಡಲಾಗುತ್ತದೆ. ಸಿಲ್ಕ್ಯಾರದಿಂದ 30 ಕಿಮೀ ದೂರದಲ್ಲಿರುವ ಸಮುದಾಯ ಆರೋಗ್ಯ ಕೇಂದ್ರದಲ್ಲಿ 41 ಹಾಸಿಗೆಗಳ ತಾತ್ಕಾಲಿಕ ವಾರ್ಡ್ ಸಿದ್ಧಪಡಿಸಲಾಗಿದೆ. ಕಾರ್ಮಿಕರನ್ನು ಸ್ಥಳಾಂತರಿಸಲು ಸುರಂಗದಲ್ಲಿ ಆಂಬ್ಯುಲೆನ್ಸ್ ವ್ಯವಸ್ಥೆಯಾಗಿದೆ.