ಪ್ರಯಾಗರಾಜ್ (ಉತ್ತರ ಪ್ರದೇಶ) :ಮಾಜಿ ಶಾಸಕ, ಸಂಸದ ಹಾಗೂಮಾಫಿಯಾ ಡಾನ್ ಅತೀಕ್ ಅಹ್ಮದ್, ಪತ್ನಿ ಶೈಸ್ತಾ ಪರ್ವೀನ್ ಕಳೆದ 50ಕ್ಕೂ ಹೆಚ್ಚು ದಿನಗಳಿಂದ ತಲೆ ಮರೆಸಿಕೊಂಡಿದ್ದರು. ಈಗ ಅವರು ಇರಬಹುದಾದ ಸ್ಥಳವನ್ನು ಪೊಲೀಸರು ಪತ್ತೆ ಹಚ್ಚಿದ್ದಾರೆ ಎನ್ನಲಾಗಿದೆ. ಕಳೆದ ಹಲವು ದಿನಗಳಿಂದ ತಲೆ ಮರೆಸಿಕೊಂಡಿದ್ದ ಅವರ ಸುಳಿವು ಈವರೆಗೂ ಸಿಕ್ಕಿರಲಿಲ್ಲ. ಹೀಗಾಗಿ ಅವರನ್ನು ಹುಡುಕಿಕೊಟ್ಟವರಿಗೆ 50 ಸಾವಿರ ರೂ ಬಹುಮಾನ ನೀಡುವುದಾಗಿ ಘೋಷಿಸಿದ್ದರು.
ಅತೀಕ್ ಅವರ ಪತ್ನಿಗಾಗಿ ಬಲೆ ಬೀಸಿದ್ದ ಉತ್ತರಪ್ರದೇಶ ಪೊಲೀಸರು, ಪ್ರಯಾಗ್ರಾಜ್ನ ಭರೇತಾ ಗ್ರಾಮದಲ್ಲಿ ಶೈಸ್ತಾ ಇರುವ ಮಾಹಿತಿ ಪಡೆದುಕೊಂಡಿದ್ದಾರೆ. ಈ ಮಾಹಿತಿಯ ಮೇರೆಗೆ ಪೊಲೀಸರು ಆರೋಪಿಯನ್ನು ಬಂಧಿಸಲು ಮುಂದಾಗಿದ್ದು, ಅವರು ಇರಬಹುದಾದ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಬೆಳಗ್ಗೆಯಿಂದಲೇ ಪೊಲೀಸರು ಶೋಧ ಕಾರ್ಯ ನಡೆಸುತ್ತಿದ್ದಾರೆ.
ಫ್ರೆಬವರಿ 24 ರಂದು ಉಮೇಶ್ ಪಾಲ್ ಹತ್ಯೆಯ ನಂತರ ಅತೀಕ್ ಅಹ್ಮದ್ ಪತ್ನಿ ಶೈಸ್ತಾ ಪರ್ವೀನ್ ನಾಪತ್ತೆಯಾಗಿದ್ದರು. ರಾಜ್ಯದ ವಿವಿಧೆಡೆ ಪೊಲೀಸರು ಹಲವು ತಂಡಗಳನ್ನು ರಚನೆ ಮಾಡಿಕೊಂಡು ತೀವ್ರ ಶೋಧ ಕೈಗೊಂಡಿದ್ದಾರೆ. ಕಳೆದ 53 ದಿನಗಳಿಂದ ಸತತ ಪ್ರಯತ್ನಪಟ್ಟರೂ ಅವರ ಸುಳಿವು ಪೊಲೀಸರಿಗೆ ಸಿಕ್ಕಿರಲಿಲ್ಲ. ಆದರೀಗ ಅವರಿಗೆ ಮಹತ್ವದ ಮಾಹಿತಿ ಲಭ್ಯವಾಗಿದ್ದು, ಆ ಹಿನ್ನೆಲೆಯಲ್ಲಿ ಕಾರ್ಯಾಚರಣೆ ತೀವ್ರಗೊಳಿಸಿದ್ದಾರೆ. ಇದಕ್ಕೂ ಹಿಂದೆ ಶೈಸ್ತಾ ಮಗ ಅಸದ್ ಎಸ್ಟಿಎಫ್ನ ಎನ್ಕೌಂಟರ್ನಲ್ಲಿ ಮೃತಪಟ್ಟಿದ್ದ, ಆಗಲಾದರೂ ಮಗನ ಅಂತ್ಯಕ್ರಿಯೆಯಲ್ಲಿ ಪರ್ವೀನ್ ಭಾಗವಹಿಸುತ್ತಾರೆ ಎಂದು ಪೊಲೀಸರು ಬಲವಾಗಿ ನಂಬಿದ್ದರು. ಆದರೆ ಪೊಲೀಸರ ನಿರೀಕ್ಷೆ ಸುಳ್ಳಾಗಿತ್ತು. ಶೈಸ್ತಾ ಮಗನ ಅಂತ್ಯ ಕ್ರಿಯೆಯತ್ತ ಸುಳಿದಿರಲೇ ಇಲ್ಲ.