ಫಿರೋಜಾಬಾದ್ (ಉತ್ತರ ಪ್ರದೇಶ): ಪೊಲೀಸ್ ಮೆಸ್ನಲ್ಲಿ ಸಿಬ್ಬಂದಿಗೆ ಕಳಪೆ ಗುಣಮಟ್ಟದ ಆಹಾರ ನೀಡಲಾಗುತ್ತಿದೆ ಎಂದು ಆರೋಪಿಸಿ, ಉಟದ ತಟ್ಟೆ ಹಿಡಿದು ಕಾನ್ಸ್ಟೇಬಲ್ನೋರ್ವ ರಸ್ತೆಯಲ್ಲಿ ಪ್ರತಿಭಟನೆ ನಡೆಸಿದ್ದರು. ಇದರ ವಿಡಿಯೋ ವೈರಲ್ ಆಗುತ್ತಿದ್ದಂತೆ ಪೊಲೀಸ್ ಇಲಾಖೆ ತನಿಖೆ ನಡೆಸಲು ಮುಂದಾಗಿತ್ತು. ಆದರೆ, ಇದೀಗ ಕಾನ್ಸ್ಟೇಬಲ್ಗೆ ಉನ್ನತ ಅಧಿಕಾರಿಗಳು ಹುಚ್ಚನ ಹಣೆಪಟ್ಟಿ ಕಟ್ಟುವ ಹುನ್ನಾರ ನಡೆಸುತ್ತಿದ್ದಾರೆಂಬ ಗಂಭೀರ ಆರೋಪ ಕೇಳಿ ಬಂದಿದೆ.
ಕಳೆದ ಕೆಲ ದಿನಗಳ ಹಿಂದೆ ಪೊಲೀಸ್ ಕಾನ್ಸ್ಟೇಬಲ್ ಮನೋಜ್ ಕುಮಾರ್ ಕೈಯಲ್ಲಿ ಊಟದ ತಟ್ಟಿ ಹಿಡಿದು ರಸ್ತೆಯಲ್ಲಿ ಪ್ರತಿಭಟನೆ ನಡೆಸುವುದರ ಜೊತೆಗೆ ಕಣ್ಣೀರು ಹಾಕಿದ್ದರು. ಪೊಲೀಸ್ ಇಲಾಖೆ ಕೊಡುತ್ತಿರುವ ಆಹಾರ ಪ್ರಾಣಿ ಕೂಡ ತಿನ್ನಲು ಸಾಧ್ಯವಿಲ್ಲ. ಆದರೆ, ಅದನ್ನು ನಮಗೆ ನೀಡಲಾಗುತ್ತಿದೆ. ಇದು ಹಿರಿಯ ಪೊಲೀಸ್ ವರಿಷ್ಠಾಧಿಕಾರಿಗಳು ಮತ್ತು ಡಿಸಿಪಿಗಳ ಮಾಡುತ್ತಿರುವ ಹಗರಣವಾಗಿದೆ ಎಂದು ವಿಡಿಯೋದಲ್ಲಿ ಪೇದೆ ಆರೋಪಿಸಿದ್ದನು. ಇದರ ವಿಡಿಯೋ ಎಲ್ಲೆಡೆ ವೈರಲ್ ಆಗಿತ್ತು. ಈ ಬೆನ್ನಲ್ಲೇ ತನಿಖೆಗೆ ಆದೇಶಿಸಲಾಗುವುದು ಎಂದು ಹೇಳಲಾಗಿತ್ತು. ಆದರೆ, ಪೊಲೀಸ್ ಕಾನ್ಸ್ಸ್ಟೇಬಲ್ ಮನೋಜ್ ಕುಮಾರ್ ಅವರ ಆರೋಪವನ್ನು ಹಿರಿಯ ಅಧಿಕಾರಿಗಳು ತಳ್ಳಿಹಾಕಿದ್ದಾರೆ.